ಬೆಂಗಳೂರು: 50 ಕೋಟಿ ಮೌಲ್ಯದ ಭೂಮಿ ವಶಕ್ಕೆ

Update: 2018-08-25 15:04 GMT

ಬೆಂಗಳೂರು, ಆ.25: ಸರಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿರುವ ಬೆಂಗಳೂರು ನಗರ ಜಿಲ್ಲಾಡಳಿತ, ನಗರ ವ್ಯಾಪ್ತಿಯ 50 ಕೋಟಿ ರೂ. ಮೌಲ್ಯದ 6.10 ಎಕರೆ ಸರಕಾರಿ ಜಮೀನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಶನಿವಾರ ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ನೇತೃತ್ವದಲ್ಲಿ, ಬೆಂಗಳೂರು ಪೂರ್ವ ತಾಲೂಕಿನ ಸಿದ್ದಾಪುರ ಗ್ರಾಮದ ಸರ್ವೆ ಸಂಖ್ಯೆ 15ರಲ್ಲಿ 1 ಎಕರೆ, ಬಾಣಸವಾಡಿಯ ಸರ್ವೆ ಸಂ.7 ರಲ್ಲಿ 10 ಗುಂಟೆ, ಹಿರಂಡಹಳ್ಳಿ ಸರ್ವೆ ಸಂ.39ರಲ್ಲಿ 4 ಎಕರೆ ಹಾಗೂ ನಾಗೊಂಡನಹಳ್ಳಿ ಸರ್ವೆ ಸಂ. 120 ರಲ್ಲಿ 1 ಎಕರೆ ಸೇರಿ ಒಟ್ಟು 6 ಎಕರೆ 10 ಗುಂಟೆ ಜಮೀನು ವಶಕ್ಕೆ ಪಡೆದರು.

ಭೂಮಿ ಬದಲು: ಬಾಣಸವಾಡಿಯ ಮುಖ್ಯರಸ್ತೆಯ 10 ಗುಂಟೆ ಸರಕಾರಿ ಜಾಗಕ್ಕೆ ಕೃಷ್ಣಪ್ಪ ಎಂಬುವರು ನಕಲಿ ದಾಖಲೆ ಸೃಷ್ಟಿಸಿ ರಾಮಕೃಷ್ಣಪ್ಪ ಎಂಬುವವರಿಗೆ ಬಾಡಿಗೆಗೆ ನೀಡಿದ್ದರು. ರಾಮಕೃಷ್ಣ ಎಂಬುವರು ಬೇರೊಬ್ಬರಿಗೆ ಜಾಗವನ್ನು ಗ್ರಾನೈಟ್ ವ್ಯಾಪಾರ ನಡೆಸಲು ಬಾಡಿಗೆಗೆ ನೀಡಿದ್ದು, ಜಿಲ್ಲಾಡಳಿತ ದಾಳಿ ನಡೆಸುವ ವಿಷಯ ತಿಳಿದು ಸ್ಥಳದಲ್ಲಿದ್ದ ಗ್ರಾನೈಟ್ ಉತ್ಪನ್ನಗಳನ್ನು ರಾತ್ರೋರಾತ್ರಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು.

ಅದೇ ರೀತಿ, ಸಿದ್ದಾಪುರ ಗ್ರಾಮದಲ್ಲಿ 1ಎಕರೆ ಭೂಮಿ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆ ಆದರ್ಶ ಡೆವಲಪರ್ಸ್‌ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ತಂತಿಬೇಲಿ ಅಳವಡಿಸಿದೆ. 1 ಎಕರೆ ಜಾಗದಲ್ಲಿ ಸಂಸ್ಥೆಯು ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಿದ್ದು, ಕಟ್ಟಡ ನಿರ್ಮಿಸಲು ಹಾಕಿದ್ದ ಅಡಿಪಾಯವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಹಿರಂಡಹಳ್ಳಿ ಗ್ರಾಮದಲ್ಲಿ ಆದೂರು ಮುರಳಿ ಎಂಬುವರು ಒತ್ತುವರಿ ಮಾಡಿಕೊಂಡಿದ್ದ 4 ಎಕರೆ ಭೂಮಿ ಹಾಗೂ ನಾಗೊಂಡನಹಳ್ಳಿಯಲ್ಲಿ ಡಿ.ನಾರಾಯಣಪ್ಪ ಎಂಬುವರು ಆಕ್ರಮಿಸಿಕೊಂಡಿದ್ದ 1 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜ್, ತಹಸಿಲ್ದಾರ್ ರಾಮ್‌ಲಕ್ಷ್ಮಣ್ ಸೇರಿ ಮತ್ತಿತರಿದ್ದರು.

ಕ್ರಿಮಿನಲ್ ಮೊಕದ್ದಮೆ ದಾಖಲಿಸಿ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಭೂಮಿ ಆಕ್ರಮಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ

-ವಿಜಯ್ ಶಂಕರ್, ಬೆಂ.ನಗರ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News