ರಾಜ್ಯದ 9 ಇಂಜಿನಿಯರಿಂಗ್ ಕಾಲೇಜುಗಳು ಟೆಕಿಪ್ ಅನುದಾನಕ್ಕೆ ಆಯ್ಕೆ

Update: 2018-08-25 15:55 GMT

ಬೆಂಗಳೂರು, ಆ.25: ತಾಂತ್ರಿಕ ಶಿಕ್ಷಣ ಗುಣಮಟ್ಟ ಉನ್ನತೀಕರಣ ಯೊಜನೆ(ಟೆಕಿಪ್) ಅಡಿ ನೀಡುವ ಅನುದಾನಕ್ಕೆ ರಾಜ್ಯದ 9 ಎಂಜಿನಿಯರಿಂಗ್ ಕಾಲೇಜು ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಆಯ್ಕೆಗೊಂಡಿವೆ.

9 ಕಾಲೇಜು ಮತ್ತು 1 ವಿಟಿಯುಗೆ ತಲಾ 7 ಕೋಟಿ ರೂ. ಅನುದಾನ ದೊರೆಯಲಿದೆ. ಟೆಕಿಪ್ 3ನೆ ಹಂತದ ಯೋಜನೆ ಇದಾಗಿದ್ದು, ಅನುದಾನವನ್ನು ವಿಶ್ವಬ್ಯಾಂಕ್ ನೀಡಲಿದೆ. ಈ ಸಂಬಂಧದ ಒಪ್ಪಂದಕ್ಕೆ ರಾಜ್ಯ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮತ್ತು ವಿಶ್ವಬ್ಯಾಂಕ್ ಪ್ರತಿನಿಧಿ ಫ್ರಾನ್ಸಿಸ್ ಸಹಿ ಹಾಕಿದ್ದಾರೆ. ಈ ವೇಳೆ ಮಾತನಾಡಿದ ದೇವೇಗೌಡ, ಆವಿಷ್ಕಾರದಲ್ಲಿ ನಮ್ಮ ರಾಜ್ಯ ಮುಂದಿದೆ. ತಾಂತ್ರಿಕತೆಗೆ ಹೊಸ ಆಲೋಚನೆಗಳನ್ನು ತನ್ನದಾಗಿಸಿಕೊಂಡು ಅದಕ್ಕೆ ಅನುಗುಣವಾಗಿ ಶಿಕ್ಷಣವನ್ನು ನೀಡಿ ಹೊಸ ಪೀಳಿಗೆ ಸೃಷ್ಟಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ವಿಶ್ವ ಬ್ಯಾಂಕ್‌ನ ಪ್ರತಿನಿಧಿ ಫ್ರಾನ್ಸಿಸ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಪರಿಶೀಲಿಸಿದಾಗ ಭಾರತ ದ್ವಿತೀಯ ಸ್ಥಾನದಲ್ಲಿದೆ. ಅದೇ ಮಾದರಿಯಲ್ಲಿ ಸವಾಲುಗಳು ಕೂಡ ಇವೆ. ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಈ ವೇಳೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಉಪಸ್ಥಿತರಿದ್ದರು.

ಆಯ್ಕೆಗೊಂಡಿರುವ ಕಾಲೇಜುಗಳು:

-ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು

-ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು, ಬೆಂಗಳೂರು

-ಎಸ್‌ಜೆಸಿಇ ಕಾಲೇಜು ಆಫ್ ಇಂಜಿನಿಯರಿಂಗ್, ಮೈಸೂರು

-ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್‌, ಮೈಸೂರು

-ಪಿಇಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್, ಮಂಡ್ಯ

-ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್, ಹಾಸನ

-ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್, ಕಲಬುರಗಿ

-ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್, ಹುಬ್ಬಳ್ಳಿ

-ಬಸವೇಶ್ವರ ಕಾಲೇಜ್ ಆಫ್ ಇಂಜಿಯರಿಂಗ್, ಬಾಗಲಕೋಟೆ

-ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಬೆಳಗಾವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News