×
Ad

ಜನ ಲಕ್ಷ್ಮೀ ಹಿಂದೆ ಓಡುತ್ತಿರುವುದರಿಂದ ಸರಸ್ವತಿಯನ್ನು ಕೇಳುವವರಿಲ್ಲ: ಡಾ.ಸಿದ್ದಲಿಂಗಯ್ಯ

Update: 2018-08-25 21:38 IST

ಬೆಂಗಳೂರು, ಆ. 25: ಜನತೆ ‘ಲಕ್ಷ್ಮೀ’(ಹಣ)ಯ ಹಿಂದೆ ನಾಗಾಲೋಟದಿಂದ ಓಡುತ್ತಿರುವುದರಿಂದ ‘ಸರಸ್ವತಿ’(ವಿದ್ಯೆ)ಯನ್ನು ಕೇಳುವರೆ ಇಲ್ಲದ ದುಸ್ಥಿತಿ ಎದುರಾಗಿದೆ ಎಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ಇಂದಿಲ್ಲಿ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ಸರಕಾರ ಸಚಿವಾಲಯ ಸಹಕಾರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಕ್ಷ್ಮೀಯು ಬೇಕು. ಆದರೆ, ಸರಸ್ವತಿಯನ್ನು ಸಮಾಜ ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಲಕ್ಷ್ಮೀಯ ಬಗ್ಗೆ ನನಗೆ ಭಕ್ತಿ ಇದೆ. ಆದರೆ, ಆಕೆಯ ಕೃಪಾಕಟಾಕ್ಷಕ್ಕೆ ನಾನು ಒಳಗಾಗಿಲ್ಲ. ಬದಲಿಗೆ ನಾನು ಸರಸ್ವತಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದು, ಒಂದು ರೀತಿಯಲ್ಲಿ ಸರಸ್ವತಿಯ ಪುತ್ರನೆಂದು ಹೇಳಬಹುದು. ಲಕ್ಷ್ಮೀಯನ್ನು ಪೂಜಿಸಬೇಕು, ಸರಸ್ವತಿಯನ್ನು ಆರಾಧಿಸಬೇಕು ಎಂದು ಅವರು ಸಲಹೆ ನೀಡಿದರು.

ಸಂಪತ್ತು ಕ್ಷಣಿಕ: ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿನ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ನೋಡಿದರೆ ಇಂದು ಕೋಟ್ಯಾಧೀಶನಾಗಿದ್ದ ವ್ಯಕ್ತಿ ಕ್ಷಣಾರ್ಧದಲ್ಲೆ ಭಿಕ್ಷುಕನಾಗುತ್ತಾನೆಂಬುದನ್ನು ನೋಡುತ್ತಿದ್ದೇವೆ. ಸಂಪತ್ತು, ಭವ್ಯ ಬಂಗಲೆ, ಆಸ್ತಿ-ಅಂತಸ್ತು ಎಲ್ಲವೂ ಕ್ಷಣಿಕ ಎಂದು ವಿಶ್ಲೇಷಿಸಿದರು. ಕೊಡಗು ಇಂದು ಬೇಡುವ ಸ್ಥಿತಿಗೆ ಬಂದಿದೆ. ಜಾತಿ-ಮತ, ಆಸ್ತಿ-ಅಂತಸ್ತು ಬದಿಗಿಟ್ಟು ಜೀವ ಉಳಿದರೆ ಸಾಕೆಂಬ ಸ್ಥಿತಿಯಲ್ಲಿದ್ದಾರೆ. ಮಾನವೀಯತೆಯ ದರ್ಶನ ಆಗುತ್ತಿದೆ. ಎಲ್ಲವನ್ನು ಮರೆತು ಸಹೋದರರಂತೆ ಸಹಾಯಕ್ಕೆ ನಿಂತಿದ್ದಾರೆ ಎಂದು ಸಿದ್ಧಲಿಂಗಯ್ಯ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್‌ಗಳಿಂದ ನಮ್ಮ ಮಕ್ಕಳು ಪೋಷಕರ ಸುಖದಿಂದ ವಂಚನೆಗೆ ಒಳಗಾಗುತ್ತಿದ್ದು, ಪೋಷಕರು ಮಕ್ಕಳೊಂದಿಗೆ ಹೆಚ್ಚೆಚ್ಚು ಬೆರೆಯಬೇಕು ಎಂದು ಸಲಹೆ ಮಾಡಿದ ಅವರು, ಮಕ್ಕಳೊಂದಿಗೆ ಬೆರೆಯುವುದು ಮನುಷ್ಯನ ಬದುಕಿನ ಅತ್ಯಂತ ಸಾರ್ಥಕ ಕ್ಷಣ ಎಂದರು.

ಕನ್ನಡ ಸಂಸ್ಕೃತಿ ಪಸರಿಸಿ: ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿತರು ಮನೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಇರಲಿ ಎಂದ ಅವರು, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಇಂಗ್ಲಿಷ್ ಮಾತನಾಡಬೇಕು, ಮನೆಯಲ್ಲೂ ಇಂಗ್ಲಿಷ್ ಮಾತನಾಡಿ ಎಂದು ತಾಕೀತು ಮಾಡುವುದು ಸಲ್ಲ. ಇಂತಹ ಶಾಲೆಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಸಚಿವಾಲಯ ಸಹಕಾರ ಸಂಘದ ಸದಸ್ಯರ ಮಕ್ಕಳಿಗೆ ಪುತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ಎನ್.ಆರ್.ಪ್ರಭು, ಉಪಾಧ್ಯಕ್ಷ ರಾಜ್‌ಕುಮಾರ್, ನಿರ್ದೇಶಕರಾದ ಅನ್ನಪೂರ್ಣ, ಗುರುಸ್ವಾಮಿ, ನಾಗವೇಣಿ, ಲತಾ, ಜಯಲಕ್ಷ್ಮಿ, ಕೃಷ್ಣಮೂರ್ತಿ, ರಮೇಶ್, ಅಭಿಜಿತ್, ವೆಂಕಟರಸಪ್ಪ ಹಾಜರಿದ್ದರು.

‘ಮಕ್ಕಳು ಹುಟ್ಟುತ್ತ ವಿಶ್ವಮಾನವರು. ಆದರೆ, ಅವರನ್ನು ನಾವಿಂದು ಜಾತಿ, ಧರ್ಮದ ಹೆಸರಿನಲ್ಲಿ ಅಲ್ಪ ಮಾನವರನ್ನಾಗಿ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ. ಮಕ್ಕಳು ಅರಳುವ ಹೂವಿನಂತಹ ಪ್ರತಿಭೆಗಳನ್ನು ಹೊಂದಿದ್ದಾರೆ. ಹೀಗಾಗಿ ಜಾತಿ, ಧರ್ಮ, ಮೌಢ್ಯಗಳಿಂದ ದೂರವಿಟ್ಟು ವಿಶ್ವಮಾನವರನ್ನಾಗಿ ಮಾಡೋಣ’

-ಡಾ.ಸಿದ್ಧಲಿಂಗಯ್ಯ ಖ್ಯಾತ ಕವಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News