ವ್ಯಂಗ್ಯಚಿತ್ರಕಾರರ ಅಕಾಡೆಮಿ ಸ್ಥಾಪನೆಗೆ ಚಿಂತನೆ: ಎನ್.ಆರ್.ವಿಶುಕುಮಾರ್
ಬೆಂಗಳೂರು, ಆ.25: ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ವ್ಯಂಗ್ಯಚಿತ್ರಕಾರರ ಅಕಾಡೆಮಿ ಸ್ಥಾಪಿಸಬೇಕೆಂದು ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆ ಸಕಾರಾತ್ಮಕವಾಗಿದ್ದು, ಈ ಕುರಿತು ಚಿಂತನೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ತಿಳಿಸಿದರು.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ನಗರದ ಕನ್ನಡ ಭವನದ ವರ್ಣಆರ್ಟ್ ಗ್ಯಾಲರಿಯಲ್ಲಿ ‘41ನೆ ರಾಜ್ಯಮಟ್ಟದ ವ್ಯಂಗ್ಯಚಿತ್ರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಂಗ್ಯಚಿತ್ರಕಾರರ ಅಕಾಡೆಮಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವಿ.ಆರ್.ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ. ಈ ಪತ್ರ ನನ್ನ ಕೈಗೆ ಸೇರಿದ ಬಳಿಕ ಅಕಾಡೆಮಿ ಸ್ಥಾಪನೆ ಕುರಿತಂತೆ ಪೂರಕವಾಗಿ ಸ್ಪಂದಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವ್ಯಂಗ್ಯಚಿತ್ರಕಾರರಿಗೆ ಧನ ಸಹಾಯ: ಕಲಾಕ್ಷೇತ್ರದಲ್ಲಿ ವ್ಯಂಗ್ಯಚಿತ್ರಕಾರರು ಸಾಕಷ್ಟು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ಈ ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವವರ ಸಂಖ್ಯೆಯು ಕಡಿಮೆಯಿದೆ. ಹೀಗಾಗಿ ವ್ಯಂಗ್ಯಚಿತ್ರಕಾರರು ತಮ್ಮ ವೃತ್ತಿಯಲ್ಲಿ ಎಷ್ಟೆ ನೈಪುಣ್ಯತೆ ಗಳಿಸಿದ್ದರೂ ಆರ್ಥಿಕವಾಗಿ ಸಬಲರಾಗುತ್ತಿಲ್ಲವೆಂದು ಅವರು ವಿಷಾದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಂಗ್ಯಚಿತ್ರಕಾರರಿಗೆ ಧನ ಸಹಾಯ ಮಾಡಲು ಸಿದ್ಧವಿದೆ. ಈಗಾಗಲೆ ಕಲಾವಿದರಿಗೆ ಧನ ಸಹಾಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಅವಕಾಶವನ್ನು ವ್ಯಂಗ್ಯಚಿತ್ರಕಾರರು ಬಳಸಿಕೊಂಡು ಅರ್ಜಿ ಸಲ್ಲಿಸಿದರೆ, ಆದ್ಯತೆ ಮೇರೆಗೆ ವ್ಯಂಗ್ಯಚಿತ್ರಕಾರರಿಗೆ ಸಹಾಯ ಮಾಡಲಾಗುವುದು ಎಂದು ಅವರು ಹೇಳಿದರು
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವಿ.ಆರ್.ಚಂದ್ರಶೇಖರ್ ಮಾತನಾಡಿ, ವ್ಯಂಗ್ಯಚಿತ್ರವು ಒಂದು ಪ್ರಮುಖ ಕಲೆಯೆಂದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಹೀಗಾಗಿ ಕೆಲವು ವಸ್ತುವಿಷಯಗಳ ಕುರಿತು ವ್ಯಂಗ್ಯಚಿತ್ರ ಬಿಡಿಸಿದರೆ, ಅದರ ವಿರುದ್ಧ ಪ್ರತಿಭಟನೆ ನಡೆಸುವಂತಹ ಪರಿಪಾಠ ಇವತ್ತಿಗೂ ಮುಂದುವರೆದಿದೆ ಎಂದು ವಿಷಾದಿಸಿದರು.
ಪಠ್ಯದಲ್ಲಿ ವ್ಯಂಗ್ಯಚಿತ್ರ ಮಾಹಿತಿಯಿರಲಿ: ಇತರೆ ಕಲೆಗಳಂತೆ ವ್ಯಂಗ್ಯಚಿತ್ರವು ಪ್ರಮುಖ ಕಲೆಯಾಗಿದೆ. ಸಮಾಜದಲ್ಲಿ ಓರೆ-ಕೋರೆಗಳ ಕುರಿತು ಜನತೆಗೆ ಸಮರ್ಥವಾಗಿ ಅರ್ಥ ಮಾಡಿಸುವಲ್ಲಿ ವ್ಯಂಗ್ಯಚಿತ್ರಗಳು ಪ್ರಮುಖ ಸಾಧನವಾಗಿದೆ. ಹೀಗಾಗಿ ಈ ಕಲೆಯ ಕುರಿತು ಶಿಕ್ಷಣದಲ್ಲಿ ಪಠ್ಯವಾಗಿಸಬೇಕಾಗಿದೆ. ಆ ಮೂಲಕ ಎಲ್ಲರಿಗೂ ವ್ಯಂಗ್ಯಚಿತ್ರದ ಕುರಿತು ಆಸಕ್ತಿ ಮೂಡಿಸಬೇಕೆಂದು ಎಂದು ಅವರು ಆಶಿಸಿದರು.
ರಾಜ್ಯಮಟ್ಟದ ವ್ಯಂಗ್ಯಚಿತ್ರ ಸಮ್ಮೇಳನದಲ್ಲಿ ಸುಮಾರು 77 ವ್ಯಂಗ್ಯಚಿತ್ರಕಾರರು ಭಾಗವಹಿಸಿದ್ದು, 150ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ಪ್ರದರ್ಶಕ್ಕಿಡಲಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ವ್ಯಂಗ್ಯಚಿತ್ರಕಾರ ಸು.ವಿ.ಮೂರ್ತಿಗೆ ದಿ.ಕೃಷ್ಣಕಾಂತ್ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಪ್ರದರ್ಶನಕ್ಕಿಟ್ಟ ವ್ಯಂಗ್ಯಚಿತ್ರಕಾರರಲ್ಲಿ ಆರು ಮಂದಿ ಉತ್ತಮ ಯುವ ವ್ಯಂಗ್ಯಚಿತ್ರಕಾರರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ಈ ವೇಳೆ ಹಿರಿಯ ವ್ಯಂಗ್ಯಚಿತ್ರಕಾರ ಬಿ.ಜಿ.ಗುಜ್ಜಾರಪ್ಪ, ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಉಪಸ್ಥಿತರಿದ್ದರು.