ತಂತ್ರಜ್ಞಾನದ ಅಭಿವೃದ್ಧಿ ಕಲೆಗೆ ಪೂರಕವಾಗಿರಲಿ: ಅನಂತಕುಮಾರ್ ಹೆಗಡೆ

Update: 2018-08-25 17:28 GMT

ಬೆಂಗಳೂರು ಆ.25: ತಂತ್ರಜ್ಞಾನವನ್ನು ಕಲೆಗೆ ಪೂರಕವಾಗಿ ಅಭಿವೃದ್ಧಿ ಪಡಿಸಿಕೊಂಡರೆ ದೇಶ-ವಿದೇಶಗಳಲ್ಲಿ ಕಲೆಯನ್ನು ಪ್ರಚಾರ ಪಡಿಸುವ ಜತೆಗೆ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಅಭಿಪ್ರಾಯಿಸಿದರು.

ಶನಿವಾರ ಆರ್ಟ್ ಬಂಧು ಸಂಸ್ಥೆಯು ನಗರದ ಬಿಎಂಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಆರ್ಟ್ ಸಮಿಟ್ ಹಾಗೂ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇವತ್ತಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕಲೆಯು ತಂತ್ರಜ್ಞಾನದ ಜತೆಯಲ್ಲಿ ತಳುಕು ಹಾಕಿಕೊಂಡಿದೆ. ಆದರೆ, ನಮ್ಮ ಸ್ವಂತಿಕೆಗೆ, ಅಭಿವ್ಯಕ್ತಿಗೆ ಧಕ್ಕೆ ಬರದಂತೆ ತಂತ್ರಜ್ಞಾನವನ್ನು ಕಲೆಯಲ್ಲಿ ಬಳಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಲೆಗಳಿಗೆ ಮಾರುಕಟ್ಟೆ ಸೃಷ್ಟಿಸುವ ಅವಸರದಲ್ಲಿ ಕಲೆಯ ಮೂಲ ಸ್ವರೂಪ ಬದಲಾಗದಂತೆ ಜಾಗ್ರತೆ ವಹಿಸಬೇಕಾಗಿದೆ. ಕಲೆಗೆ ಹಾಗೂ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ನಮ್ಮ ದೇಶಿಯ ಸಂಘ, ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಿಎಂಎಸ್ ಇಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಾಬು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇದೇ ವೇಳೆ ಸಚಿವ ಅನಂತ ಕುಮಾರ್ ಹೆಗಡೆ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅಗತ್ಯ ನೆರವು ನೀಡಲಿದೆ. ನಮ್ಮ ಸರಕಾರದ ಪ್ರತಿನಿಧಿಯಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲೆಗೆ ಭೇಟಿ ನೀಡಿ, ಸ್ಥಳೀಯರು ಹಾಗೂ ನಿರಾಶ್ರಿತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ಸರಕಾರ ಕೊಡಗಿನಲ್ಲಾಗಿರುವ ಹಾನಿಯ ಬಗ್ಗೆ ವಿಸ್ತೃತ ವರದಿ ಸಲ್ಲಿಸಿದ ನಂತರ ಅಗತ್ಯ ನೆರವನ್ನು ಕೇಂದ್ರ ಸರಕಾರ ನೀಡಲಿದೆ.

-ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News