ವನ್ಯ ಜೀವಿಗಳ ಬದುಕು ಮತ್ತು ಸಂರಕ್ಷಣೆಯಲ್ಲಿ ಕನ್ನಡದ ಮನಸ್ಸುಗಳು

Update: 2018-08-25 19:13 GMT

 

ಡಾ.ಶಿವರಾಮ ಕಾರಂತ               ಡಾ. ಉಲ್ಲಾಸ ಎಸ್. ಕಾರಂತ

ಹುಲಿ ಎಂದಾಕ್ಷಣ ನಮಗೆ ತಕ್ಷಣ ನೆನಪಾಗುವ ಹೆಸರು ಡಾ. ಉಲ್ಲಾಸ ಎಸ್. ಕಾರಂತ. ಭಾರತದ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮವನ್ನು ನೀಡಿದ ಸಂಶೋಧಕ ಜೀವಶಾಸ್ತ್ರಜ್ಞ ಡಾ. ಉಲ್ಲಾಸ ಕಾರಂತರು ಭಾರತೀಯ ಸಾಹಿತ್ಯದ ದಿಗ್ಗಜ, ಕಡಲತಡಿಯ ಭಾರ್ಗವರೆಂಬ ಅಭಿದಾನದ ಡಾ.ಶಿವರಾಮ ಕಾರಂತರ ಮಗ. ತಂದೆಯ ಪ್ರಭಾವ ಇವರ ಮೇಲೆ ಗಾಢವಾಗಿದೆ. ಭಾರತದ ನಾಗರಹೊಳೆ, ಪೆಂಚ್, ಕಾನಾ, ಖಾಜೀರಂಗ್, ನಾರ್ಮ್ ಧಪಾ ಮುಂತಾದ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಪತ್ರಿಕೆ, ಗ್ರಂಥಗಳಿಗೆ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ. ಲಂಡನ್ನಿನ ಜಿಯಾಲಾಜಿಕಲ್ ಸೊಸೈಟಿ, ನ್ಯೂಯಾರ್ಕ್ ಅಕಾಡಮಿ ಆಫ್ ಸೈನ್ಸಸ್ ಸಂಸ್ಥೆಗಳಿಂದ ಸೈಂಟಿಫಿಕ್ ಫೆಲೋ ಗೌರವಕ್ಕೆ ಭಾಜನರಾಗಿದ್ದಾರೆ. ಇವರ ಆಂಗ್ಲ ಪುಸ್ತಕಗಳು : The Way of the Tiger , Monitoring Tigers and their Prey, A View from the Machan, Camera traps in Animal Ecology.. ಯುಕೆ, ಯುಎಸ್‌ಎ, ಮಲೇಶಿಯಾ, ಇಂಡೋನೇಶ್ಯಾ, ಥಾಯ್ಲೆಂಡ್, ಟರ್ಕಿ ಮುಂತಾದ ದೇಶಗಳಿಗೆ ಇವರ ವೈಜ್ಞಾನಿಕ ಅಧ್ಯಯನದ ಲಾಭವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಇವರು ವ್ಯಾಪಕ ವಿದೇಶ ಪ್ರವಾಸ ಮಾಡಿದ್ದಾರೆ. ಲಂಡನ್, ಕ್ಯಾಲಿಫೋರ್ನಿಯಾ, ಮೆಸ್ಸಾಚುಸೆಟ್ಸ್ ವಿಶ್ವವಿದ್ಯಾನಿಲಯಗಳಲ್ಲಿ ಇವರು ಆಹ್ವಾನಿತ ಭಾಷಣಕಾರರು. ನ್ಯೂಯಾರ್ಕ್ ಟೈಮ್ಸ್, ನ್ಯಾಷನಲ್ ಜಿಯಾಗ್ರಾಫಿಕ್ ನಂಥ ಪತ್ರಿಕೆಗಳಲ್ಲಿ, ಬಿಬಿಸಿ, ಸ್ಕೈ ಟಿವಿ, ಡಿಸ್ಕೃರಿ, ನ್ಯಾಷನಲ್ ಜಿಯಾಗ್ರಫಿ ಮೊದಲಾದ ಟಿವಿ ವಾಹಿನಿಗಳಲ್ಲಿ ಇವರ ಕಾರ್ಯಸಾಧನೆಗಳು ಪ್ರಸಾರವಾಗಿದೆ. ಇವರ ಮಗಳು ಡಾ.ಕೃತಿ ಕಾರಂತ ಕೂಡ ತಂದೆಯ ಮಾರ್ಗವನ್ನೇ ಅನುಸರಿಸಿದವರು. ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಸಂಘ ಸಂಸ್ಥೆಗಳಲ್ಲಿ ಇವರು ಸದಸ್ಯತ್ವ ಗೌರವವನ್ನೂ, ಗ್ಲೋಬಲ್ ಟೈಗರ್ ಯುಕೆ, ಟೈಗರ್ ಆ್ಯಕ್ಷನ್ ಫಂಡ್ ಫಾರ್ ಇಂಡಿಯಾ ಮುಂತಾದ ಸರಕಾರೇತರ ಸಂಘಟನೆಗಳಿಗೆ ಸಲಹಾಗಾರರಾಗಿದ್ದಾರೆ. ಭಾರತದ ರಾಷ್ಟ್ರೀಯ ಹುಲಿಯೋಜನೆಯ ಸಂಚಾಲಕರಾಗಿಯೂ, ಕರ್ನಾಟಕ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯರಾಗಿಯೂ, ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯ ನಿರ್ದೇಶಕರೂ, ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ನಿರ್ದೇಶಕರಾಗಿದ್ದಾರೆ. ಸಿಯೆರಾ ಕ್ಲಬ್ ಅರ್ಥಕೇರ್, ಜೆ.ಪಾಲ್ ಗೆಟ್ಟಿ, ಬಿಎನ್‌ಎಚ್ ನ ಸಲೀಂ ಅಲಿ, ಇಂಡಿಯನ್ ಅಕಾಡಮಿ ಆಫ್ ಸೈನ್ಸ್ ಸದಸ್ಯತ್ವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಸಂದಿವೆ. 2012 ರಲ್ಲಿ ಭಾರತ ಸರಕಾರ ಇವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಜಗತ್ಪ್ರಸಿದ್ಧ ವನ್ಯಜೀವಿ ಜೀವಶಾಸ್ತ್ರಜ್ಞ ಡಾ. ಜಾರ್ಜ್ ಷಾಲರ್ ಇವರ ಬಗ್ಗೆ ಆಡಿದ ಮಾತುಗಳಿವು: ‘‘ವೈಜ್ಞಾನಿಕ ಸಾಧನಗಳನ್ನು ಬಳಸಿ ಹುಲಿಯಂತಹ ಅದ್ಭುತ ಜೀವಿಯ ಉಳಿವಿಗಾಗಿ ಶ್ರಮಿಸಿದವರಲ್ಲಿ ಕೆ. ಉಲ್ಲಾಸ ಕಾರಂತರಂಥವರು ಭಾರತದಲ್ಲೇ ಏಕೆ, ಜಗತ್ತಿನಲ್ಲೇ ಮತ್ತೊಬ್ಬರಿಲ್ಲ. ಹುಲಿಗಳ ಬದುಕಿನ ಬಗೆಗೆ ಸುಮಾರು ಎರಡು ದಶಕಗಳ ಕಾಲ ತತ್ಪರತೆಯಿಂದ ಅಧ್ಯಯನ ಮಾಡಿದ ಉಲ್ಲಾಸ ಕಾರಂತರು ಭಾರತದ ಅತಿಕುಶಲ ಕ್ಷೇತ್ರ ಜೀವಶಾಸ್ತ್ರಜ್ಞರಾಗಿಯೂ ಹುಲಿಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸಿ ಯಶ ಕಂಡ ಸಂರಕ್ಷಣಾವಾದಿಯಾಗಿಯೂ ವಿಶ್ವದ ಗಮನ ಸೆಳೆದಿದ್ದಾರೆ. ಅವರ ವೈಜ್ಞಾನಿಕ ಕಾರ್ಯಕುಶಲತೆ, ಸಂರಕ್ಷಣಾವಾದಿಯಾಗಿ ಅವರ ಹಿರಿಮೆಯನ್ನು ಹೆಚ್ಚಿಸಿವೆ. ಹುಲಿ ಮತ್ತು ಬಲಿಪ್ರಾಣಿಗಳ ಗಣತಿಗಾಗಿ ವಿಶ್ವಸನೀಯ ತಂತ್ರಗಳನ್ನು ಅಭಿವೃದ್ಧಿಪಡಿಸಿರುವ ಕಾರಂತರು ಇವೆರಡು ಸಂಖ್ಯೆಗಳ ನಡುವೆ ಇರುವ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ವನ್ಯಧೋರಣೆಗಳು ಮತ್ತು ವನ್ಯಧಾಮಗಳ ನಿರ್ವಹಣೆಯ ಮೇಲೆ ಕಾರಂತರ ಆಳವಾದ ಅರಿವು ಸಾಕಷ್ಟು ಪ್ರಭಾವ ಬೀರಿದೆ. ಅಂತರ್‌ರಾಷ್ಟ್ರೀಯ ಮಟ್ಟದ ವನ್ಯ ಪರಿಜ್ಞಾನ ಹಾಗೂ ಸಂಶೋಧನಾ ತಂತ್ರಗಳ ಮೇಲೂ ಕಾರಂತರ ಅರಿವಿನ ಪ್ರಭಾವ ಅಪಾರ ವೈಜ್ಞಾನಿಕ ಮತ್ತು ಜನಪ್ರಿಯ ಬರೆವಣಿಗೆಗಳೆರಡರಲ್ಲೂ ಸಿದ್ಧಹಸ್ತರಾದ ಕಾರಂತರ ಲೇಖನಗಳೂ ಪುಸ್ತಕಗಳೂ ವ್ಯಾಪಕವಾಗಿ ಓದುಗರ ಗಮನ ಸೆಳೆದಿವೆ. ಕಾರಂತರಿಂದ ತರಬೇತು ಪಡೆದ ಯುವಕ್ಷೇತ್ರ ಜೀವಶಾಸ್ತ್ರಜ್ಞರ ಪಡೆಯ ತತ್ಪರತೆ, ಉತ್ಸಾಹಗಳನ್ನು ಕಂಡು ನಾನು ಬೆರಗಾಗಿದ್ದೇನೆ. ಉಲ್ಲಾಸ ಕಾರಂತರು ವನ್ಯಜೀವಿ ಮತ್ತು ಅರಣ್ಯಗಳ ಉಳಿವಿಗಾಗಿ ಇತರರಲ್ಲಿ ಮೂಡಿಸುತ್ತಿರುವ ಜ್ಞಾನ, ಸ್ಫೂರ್ತಿ, ಸಮರ್ಪಣಾ ಭಾವಗಳು ಮುಂಬರುವ ದಿನಗಳಲ್ಲಿ ಹುಲಿ ಮತ್ತಿತರ ಪ್ರಾಣಿಗಳ ಉಳಿವಿನಲ್ಲಿ ಮಹತ್ವ್ವದ ಪಾತ್ರ ವಹಿಸಲಿವೆ. ಈ ಸೃಷ್ಟಿಯಲ್ಲಿ ಅತ್ಯಂತ ಸ್ಫುರದ್ರೂಪಿಯಾದ, ಪ್ರಾಚೀನ ಪ್ರಾಣಿವಂಶವಾಹಿನಿಯ ಕೊಂಡಿಯಾಗಿ ಈಗ ನಮಗೆ ನೋಡಲು ಸಿಗುತ್ತಿರುವುದು ಹುಲಿ ಮಾತ್ರ. ಇವುಗಳು ನಮ್ಮ ಜೊತೆಯೇ ಬದುಕಬೇಕಾಗಿದೆ. ಇವುಗಳ ರಕ್ಷಣೆ ಅತೀ ಅಗತ್ಯವಾಗಿದೆ. 2010 ಜುಲೈ 29ರಿಂದ ಸೇಂಟ್ ಪೀಟಸ್ ಬರ್ಗ್ ಎಂಬವರಿಂದ ವಿಶ್ವ ಹುಲಿ ದಿನಾಚರಣೆ ಆರಂಭವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News