ಮಂಗಳೂರಿನ ಪ್ರಪ್ರಥಮ ‘ಸ್ಕೈವಾಕ್’ಗೆ ಗ್ರಹಣ

Update: 2018-08-26 08:55 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಆ.25: ಕಳೆದ ಎರಡು ವರ್ಷಗಳಿಂದ ಭಾರೀ ಸುದ್ದಿಯಲ್ಲಿದ್ದ ಮಂಗಳೂರಿನ ಪ್ರಪ್ರಥಮ ‘ಸ್ಕೈವಾಕ್’ಗೆ ಇದೀಗ ಗ್ರಹಣ ಹಿಡಿದಿದೆ. ನಿರ್ವಹಣೆ ವೆಚ್ಚ ಅಧಿಕವಾಗಲಿದೆ ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿದ್ದು, ಸ್ಮಾರ್ಟ್ ಸಿಟಿಯಡಿ ಹೊಸ ಯೋಜನೆಗೆ ನೀಲ ನಕಾಶೆ ಸಿದ್ಧಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಮಂಗಳೂರಿನ ಪ್ರಮುಖ ರಸ್ತೆಗಳ ಅಗಲೀಕರಣ, ಕಾಂಕ್ರಿಟೀಕರಣದ ವೇಳೆ ಫುಟ್‌ಪಾತ್‌ಗಳು ಮಾಯವಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ಷೇಪದ ಮೇರೆಗೆ ‘ಸ್ಕೈವಾಕ್’ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿತ್ತು. ನಗರದ ಪುರಭವನದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯ ಪಕ್ಕ ‘ಸ್ಕೈವಾಕ್’ ಮಾಡುವುದೆಂದು ನಿರ್ಧರಿಸಲಾಗಿತ್ತಲ್ಲದೆ, 2016ರ ಆಗಸ್ಟ್ 23ರಂದು ಅಂದಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈವರಿಂದ ಶಿಲಾನ್ಯಾಸವನ್ನೂ ಮಾಡಿಸಲಾಗಿತ್ತು.

ಸುಮಾರು 100 ಅಡಿ ಉದ್ದದ ಈ ಸ್ಕೈವಾಕ್‌ಗೆ 1.56 ಕೋ.ರೂ. ವೆಚ್ಚ ನಿಗದಿಪಡಿಸಲಾಗಿತ್ತು. ಅದರಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ 78 ಲಕ್ಷ ರೂ. ಮತ್ತು ಮನಪಾ 4.10 ಲಕ್ಷ ರೂ. ಹಾಗೂ ಉಳಿದ ಹಣವನ್ನು ಇತರ ಮೂಲಗಳಿಂದ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಶಿಲಾನ್ಯಾಸದ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳು 10 ತಿಂಗಳೊಳಗೆ ‘ಸ್ಕೈವಾಕ್’ ಸಿದ್ಧವಾಗಲಿದೆ ಎಂದಿದ್ದರು. ಆದರೆ ಎರಡು ವರ್ಷ ಕಳೆದರೂ ಕೂಡ ಸ್ಕೈವಾಕ್ ಕಾಣಿಸಲಿಲ್ಲ. ಪಾದಚಾರಿಗಳು ಅದೇ ಕಲ್ಲುಚಪ್ಪಡಿಯ ಸಮತೋಲನ ಮಾಡಿ ನಡೆದಾಡುತ್ತಿದ್ದಾರೆ.

 ಆರಂಭದಲ್ಲಿ ಈ ಯೋಜನೆಗೆ 82 ಲಕ್ಷ ರೂ. ಮೊತ್ತ ಅಂದಾಜಿಸಲಾಗಿತ್ತು. ಇದು ಮಂಗಳೂರಿನ ಪ್ರಪ್ರಥಮ ಸ್ಕೈವಾಕ್ ಆದ ಕಾರಣ ಹೊಸದಿಲ್ಲಿ ಮಾದರಿಯ ಅತ್ಯಾಧುನಿಕ ಸ್ಕೈವಾಕ್ ನಿರ್ಮಿಸಲು ಅಂದಿನ ಶಾಸಕ ಜೆ.ಆರ್.ಲೋಬೊ ಆಶಿಸಿದ್ದರು. ಸ್ಕೈವಾಕ್‌ಗೆ ಹತ್ತುವಾಗ ಮತ್ತು ಇಳಿಯುವಾಗ ಒಂದೇ ಸಮನೆ ಮೇಲೆ ಹತ್ತಿ ಕೆಳಗೆ ಇಳಿಯುವ ಮೆಟ್ಟಿಲ ಸಾಲು (ಎಸ್ಕಲೇಟರ್) ಅನ್ನು ಅಳವಡಿಸಲು ತೀರ್ಮಾನಿಸಲಾಗಿತ್ತು. ಹಾಗಾಗಿ ಅದಕ್ಕೆ ಬೇಕಾದ ಮೊತ್ತ ಕೂಡ ಅಧಿಕವಾಗಿತ್ತು. ಎಲ್ಲವೂ ಅಂದುಕೊಂಡಂತ್ತಿದ್ದರೆ ಇಷ್ಟರಲ್ಲಿ ‘ಸ್ಕೈವಾಕ್’ ಜನರಿಗೆ ಲಭ್ಯವಾಗುತಿತ್ತು. ಈ ರಸ್ತೆಯನ್ನು ಬಳಸುವ ಪಾದಚಾರಿಗಳು ಇಂದು-ನಾಳೆ ಅಂತ ‘ಸ್ಕೈ ವಾಕ್’ಗೆ ಕಾದದ್ದೇ ಬಂತು. ಅಧಿಕಾರಿಗಳು ಈ ಯೋಜನೆಯ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. ‘ಸ್ಕೈವಾಕ್’ನ ನಿರ್ವಹಣೆ ವೆಚ್ಚ ಕೂಡ ಅಧಿಕವಾಗಲಿದೆ ಎಂಬ ಕಾರಣದಿಂದ ಈ ಯೋಜನೆಯನ್ನು ಕೈ ಬಿಡಲಾಗಿದೆ. ಹಾಗಾಗಿ ಎರಡು ವರ್ಷದ ಹಿಂದೆ ಅದ್ಧೂರಿಯಾಗಿ ನೆರವೇರಿಸಿದ್ದ ಶಂಕುಸ್ಥಾಪನೆ ಕೂಡ ವ್ಯರ್ಥವಾಗಿದೆ.

► ನಿರ್ವಹಣೆ ವೆಚ್ಚ ಅಧಿಕ: ಈ ಸ್ಕೈವಾಕ್‌ಗೆ ಎಸ್ಕಲೇಟರ್ ಕೂಡ ಬಳಸಲಾಗುವ ಕಾರಣ ಕಾಲಕಾಲಕ್ಕೆ ಇದರ ನಿರ್ವಹಣೆ ಮಾಡಬೇಕು. ಈ ನಿರ್ವಹಣೆ ವೆಚ್ಚವು ಅಧಿಕವಾಗಲಿದೆ ಎನ್ನಲಾಗಿದೆ. ಇದು ದುಬಾರಿಯಾಗುವ ಹಿನ್ನ್ನೆಲೆಯಲ್ಲಿ ಯೋಜನೆಯನ್ನೇ ಕೈ ಬಿಡಲು ಆಡಳಿತ ವರ್ಗ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

► ಫುಟ್‌ಪಾತ್‌ಗಳೇ ಇಲ್ಲ: ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ಗಳೇ ಇಲ್ಲ. ಎಲ್ಲವನ್ನೂ ಕಾಂಕ್ರಿಟ್ ರಸ್ತೆಗಳೇ ಅತಿಕ್ರಮಿಸಿಕೊಂಡಿವೆ. ಕೆಲವು ರಸ್ತೆಗಳಲ್ಲಿ ಒಂದು ಕಡೆ ಮಾತ್ರ ಫುಟ್‌ಪಾತ್ ಇದೆ. ಇನ್ನು ಕೆಲವು ಕಡೆ ಫುಟ್‌ಪಾತೇ ಇಲ್ಲ. ಹಲವು ಕಡೆ ಫುಟ್‌ಪಾತ್ ಮೇಲೆ ಅಳವಡಿಸಲಾದ ಚಪ್ಪಡಿ ಕಲ್ಲು ಅಥವಾ ಸ್ಲಾಬ್‌ಗಳು ಬಾಯ್ದೆರೆದಿವೆ. ಇತ್ತೀಚಿನ ದಿನಗಳಲ್ಲಂತೂ ನಗರದ ಬಹುತೇಕ ಕಡೆ ಸಂಚಾರ ದಟ್ಟನೆ ಅಧಿಕವಾಗಿದ್ದು, ಪಾದಚಾರಿಗಳು ನಡೆದಾಡಲು ಪರದಾಡಬೇಕಿದೆ.

ನಗರದ ಪುರಭವನ, ಲೇಡಿಗೋಶನ್, ವೆನ್ಲಾಕ್, ಹಂಪನಕಟ್ಟೆ, ಜ್ಯೋತಿ, ಬಂಟ್ಸ್‌ಹಾಸ್ಟೆಲ್, ಬೆಂದೂರ್‌ವೆಲ್, ಕರಾವಳಿ ಸರ್ಕಲ್ ಹೀಗೆ ಪ್ರಮುಖ ಜಂಕ್ಷನ್ ಮತ್ತಿತರ ಕಡೆ ಸ್ಕೈವಾಕ್‌ನ ಆವಶ್ಯಕತೆ ಇದೆ. ಆದರೆ, ಪ್ರಪ್ರಥಮ ಸ್ಕೈವಾಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕಿದ್ದ ಯೋಜನೆಯೇ ಹಳ್ಳ ಹಿಡಿಯುತ್ತಿರುವುದು ವಿಪರ್ಯಾಸ.

ಆಡಳಿತ ವರ್ಗಕ್ಕೆ ಜನರಿಗೆ ಸಹಾಯವಾಗುವಂತಹ ಯೋಜನೆಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿ ಇಲ್ಲ. ಇದ್ದಿದ್ದರೆ ಇಂತಹ ಯೋಜನೆಗಳು ಹಳ್ಳ ಹಿಡಿಯುತ್ತಿರಲಿಲ್ಲ. ಇಂದಿನ ಜನಪ್ರತಿನಿಧಿಗಳಿಗೂ ಅಭಿವೃದ್ಧಿಯ ವಿಷಯದಲ್ಲಿ ದೂರದೃಷ್ಟಿ ಇಲ್ಲ. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮದೇ ನೇತೃತ್ವದ ವಿವಿಧ ಸಂಘಟನೆಗಳ ಮೂಲಕ ಅನೇಕ ಸಮಸ್ಯೆಗಳನ್ನು ಬೊಟ್ಟು ಮಾಡಿ ಅವುಗಳ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ, ಪ್ರಯೋಜನ ಶೂನ್ಯ. ‘ಸ್ಕೈವಾಕ್’ ಮಾಡಿಸುವುದಾಗಿ ಎರಡು ವರ್ಷದಿಂದ ಆಸೆ ಹುಟ್ಟಿಸಿ ಇದೀಗ ಈ ಯೋಜನೆಯನ್ನು ಕೈ ಬಿಡುತ್ತಿರುವುದು ವಿಪರ್ಯಾಸ.

-ಅಲಿ ಹಸನ್,ಅಧ್ಯಕ್ಷರು, ಮಂಗಳೂರು ಸೆಂಟ್ರಲ್ ಕಮಿಟಿ

ಸಾರ್ವಜನಿಕರ ಅಪೇಕ್ಷೆಯ ಮೇರೆಗೆ ಸ್ಕೈವಾಕ್ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಅದರ ನಿರ್ವಹಣೆಯ ವೆಚ್ಚವು ದುಬಾರಿಯಾಗಲಿದೆ. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.

-ಮುಹಮ್ಮದ್ ನಝೀರ್,ಆಯುಕ್ತರು, ಮನಪಾ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News