ಸಿನೆಮಾ ನಿರ್ದೇಶಕ ಕೆ.ವಿ. ಜಯರಾಂ

Update: 2018-08-26 09:18 GMT
ಕೆ.ವಿ. ಜಯರಾಂ

ವರದಕ್ಷಿಣೆ ಸಮಸ್ಯೆ, ಹೆಣ್ಣಿನ ಶೋಷಣೆಗಳ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದು ಸರ್ವ ಜನಾದರಣೀಯವಾದ ಚಿತ್ರ ‘ರಂಜಿತಾ’. ಈ ಚಿತ್ರ ಅವರಿಗೆ ಅದ್ಭುತ ಯಶಸ್ಸನ್ನು ತಂದುಕೊಟ್ಟಿತು. ಅವರು ಪ್ರತಿಬಾರಿ ಚಿತ್ರ ನಿರ್ದೇಶಿಸುವಾಗಲೂ ಹೊಸ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡುವರು. ಅವರೇ ಹೇಳುವಂತೆ ಪ್ರತಿಬಾರಿ ನನ್ನ ಚಿತ್ರಗಳಿಗೆ ಹೊಸಬರನ್ನೇ ಹುಡುಕುತ್ತೇನೆ. ಆಸಕ್ತಿಯಿಂದ ಅಭಿನಯವನ್ನು ಕಲಿಯುವಂತಹ ಕಲಾವಿದರು ಬೇಕು ಎನ್ನುತ್ತಾರೆ.

ಕನ್ನಡ ಚಿತ್ರರಂಗ ಭಾರತೀಯ ಇತರ ಪ್ರಾದೇಶಿಕ ಚಿತ್ರರಂಗಗಳಿಗೆ ಹೊಯ್‌ಕಯ್ಯಾಗಿ ಬೆಳೆದುಬಂದಿದೆ. ಅಲ್ಲದೆ ತನ್ನದೇ ಆದ ಇತಿಹಾಸವನ್ನು ಹೊಂದಿ, ಉತ್ತಮ ಭವಿಷ್ಯದ ಕಡೆಗೆ ದಾಪುಗಾಲು ಇಡುತ್ತಿದೆ. ಪ್ರಾದೇಶಿಕ ಚಿತ್ರರಂಗ ಆಗಾಗ ಹಲವಾರು ಸಮಸ್ಯೆಗಳಿಗೆ ಸಿಗಬಹುದು. ಅಂತಹ ಯಾವ ಸಮಸ್ಯೆಯಿಂದಲೂ ಬೆದರದೆ ಸಮೃದ್ಧವಾಗಿ ಇಂದು ಕನ್ನಡ ಚಿತ್ರರಂಗ ಬೆಳೆದು ನಿಂತಿದೆ. ಈ ರೀತಿಯ ಸಾಧನೆ ನಿಜಕ್ಕೂ ಆಶ್ಚರ್ಯಕರವಾದುದು.

1934ರ ‘ಸತಿ ಸುಲೋಚನಾ’ದಿಂದ ಆರಂಭವಾಗಿ ಇಲ್ಲಿಯವರೆಗೆ ಸುಮಾರು 2,000 ಚಿತ್ರಗಳು ನಿರ್ಮಾಣವಾಗಿವೆೆ. ಇಷ್ಟು ಚಿತ್ರಗಳ ಸಮೃದ್ಧ ಫಸಲು ಕನ್ನಡ ಚಿತ್ರರಂಗದ ಸಾಧನೆ. ಇದು ಯಾವುದೇ ಪ್ರಾದೇಶಿಕ ಚಿತ್ರರಂಗ ಹೆಮ್ಮೆ ಪಡಬಹುದಾದಂತಹುದು.

ಕಳೆದ ಏಳು ದಶಕಗಳಲ್ಲಿ ಬೆಳೆದು ಬಂದಿರುವ ಕನ್ನಡ ಚಿತ್ರರಂಗದ ಈ ಸಾಧನೆಯ ಸಿದ್ಧಿಗಾಗಿ ಅಪಾರವಾಗಿ ದುಡಿದಿರುವವರೆಂದರೆ ನಿರ್ದೇಶಕರು. ಒಂದು ಚಿತ್ರದ ಮಾದರಿ ಅದು ಇದೇ ರೀತಿ ಇರಬೇಕು ಎಂದು ಶ್ರಮವಹಿಸಿ ದುಡಿಯುವವರು ಮತ್ತು ದುಡಿಸುವರು ಈ ನಿರ್ದೇಶಕರು. ಅವರ ಪ್ರತಿಭೆ ಬಹುಮುಖವಾದುದು. ಇಂಥ ಬಹುಮುಖ ಪ್ರತಿಭೆಯ ಧೀಮಂತ ನಿರ್ದೇಶಕರುಗಳ ಸಾಲಿನಲ್ಲಿ ಹೆಸರಿಸಲೇಬೇಕಾದವರು ಕೆ.ವಿ. ಜಯರಾಂ ಅವರು.

ಮಂಡ್ಯ ಜಿಲ್ಲೆ ಎಲ್ಲ ಕಲೆಗಳಿಗೂ ಆಶ್ರಯ ನೀಡಿರುವುದಲ್ಲದೆ, ತನ್ನಲ್ಲೇ ಹಲವಾರು ಕಲೆಗಳನ್ನು ಹುದುಗಿಸಿಕೊಂಡಿದೆ. ಇದು ಪ್ರಾಕೃತಿಕ ಸಂಪತ್ತಿನ ಸಿರಿಯಾಗಿರುವಂತೆಯೇ ಕಲಾ ಸಂಪತ್ತಿನ ಸಿರಿಯೂ ಆಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎಲೆಕೊಪ್ಪ ಶ್ರೀ ಕೆ.ವಿ. ಜಯರಾಂ ಅವರ ಜನ್ಮಸ್ಥಳ. ಮಂಡ್ಯದ ಮಣ್ಣಿನ ಮಗನಾಗಿ ಹುಟ್ಟಿ ಬೆಳೆದು ಕಲಾ ಜಗತ್ತಿನ ಅದ್ಭುತ ಪ್ರತಿಭೆಯಾಗಿ ಅರಳಿದ ಚೇತನವೇ ಕೆ.ವಿ. ಜಯರಾಂ. ಗ್ರಾಮೀಣ ಬದುಕಿನ ಜೀವನಾಡಿಯ ತುಡಿತ ಅವರಲ್ಲಿ ಇರುವುದರಿಂದ ಅವರು ಚಿತ್ರದಿಂದ ಚಿತ್ರಕ್ಕೆ ಎಲ್ಲಾ ಜನರಿಗೂ ಹತ್ತಿರವಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 70 ರ ದಶಕದಲ್ಲಿ ಹೊಸ ಅಲೆ ಆರಂಭವಾಯಿತು. ಈ ಹೊಸ ಅಲೆಯಿಂದ ಕನ್ನಡ ಚಿತ್ರಗಳ ಖ್ಯಾತಿ ಸಾಗರದಾಚೆಗೂ ವಿಸ್ತರಿಸಿತು. ಈ ಕಾಲದಲ್ಲಿ ಕೆ.ವಿ. ಜಯರಾಂ ನಿರ್ದೇಶಕರಾದರು. ಇವರು ಹೆಸರಾಂತ ಚಿತ್ರ ನಿರ್ದೇಶಕ ಎಂ.ಆರ್. ವಿಠಲ್ ಅವರ ಬಳಿ ಸುಮಾರು ಹತ್ತು ವರ್ಷಗಳ ಕಾಲ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವನ್ನು ಪಡೆದರು. 1979ರಲ್ಲಿ ಕೆ.ವಿ. ಜಯರಾಂ ಅವರು ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಸ್ಥಾನ ಪಡೆದರು. ಕೆ.ಆರ್. ಪಿಕ್ಚರ್ಸ್‌ ಲಾಂಛನದ ಮರಳು ಸರಪಣಿ ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊತ್ತಮೊದಲನೆಯ ಚಿತ್ರ. ಕನ್ನಡದ ಅಂದಿನ ಜನಪ್ರಿಯ ನಾಯಕ ನಟರಲ್ಲಿ ಒಬ್ಬರಾದ ಕಲ್ಯಾಣ್ ಕುಮಾರ್ ಆ ಚಿತ್ರದ ನಾಯಕ ನಟ.

ಬಾಡದ ಹೂ, ಬೆತ್ತಲೆ ಸೇವೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಒಲವೇ ಬದುಕು, ವರ್ಣಚಿತ್ರ, ಮಾಧುರಿ, ಹೊಸನೀರು, ಅರುಣರಾಗ, ಒಲವಿನ ಆಸರೆ, ಶರವೇಗದ ಸರದಾರ, ಮತ್ಸರ, ಪೋಲಿಕಿಟ್ಟಿ, ಕೆರಳಿದ ಕೇಸರಿ, ಹೊಸರಾಗ, ಮೇಘಮಂದಾರ, ಶ್ವೇತಗುಲಾಬಿ, ರಂಜಿತಾ ಇವೇ ಮುಂತಾದವು ಕೆ.ವಿ. ಜಯರಾಂ ಅವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳು. ಹೃದಯಂಗಮವಾದ ಕಥೆ. ವರದಕ್ಷಿಣೆ ಸಮಸ್ಯೆ, ಹೆಣ್ಣಿನ ಶೋಷಣೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳನ್ನು ಕೆ.ವಿ. ಜಯರಾಂ ಅವರು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಚಿತ್ರಗಳು ಹಲವಾರು ಪ್ರಶಸ್ತಿಗಳಿಗೆ ಪಾತ್ರವಾಗಿವೆ. ಅರುಣರಾಗ ಚಿತ್ರದಿಂದ ಗೀತಾ ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾದರೆ, ಹೊಸ ನೀರು ಚಿತ್ರದಿಂದ ಕೆ.ವಿ. ಜಯರಾಂ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಅನಂತನಾಗ್ ಶ್ರೇಷ್ಠ ನಟ ಪ್ರಶಸ್ತಿ, ಶಶಿಕಲಾ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬಾಡದ ಹೂ ಚಿತ್ರದಿಂದ ಶ್ರೀಯುತರಿಗೆ ಮತ್ತೊಂದು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿತು. ರಂಜಿತ ಚಿತ್ರದಿಂದ ನಟಿ ಶ್ರುತಿ ಆರ್ಯಭಟ ಪ್ರಶಸ್ತಿಗೆ ಪಾತ್ರರಾದದ್ದಲ್ಲದೇ, ಕೋಲ್ಕತಾದಲ್ಲಿ ಜರುಗಿದ 25ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಪನೋರಮಾ ವಿಭಾಗಕ್ಕೆ ಆಯ್ಕೆಗೊಂಡ ಹಿರಿಮೆ ರಂಜಿತಾ ಚಿತ್ರದ್ದಾಗಿದೆ. ಇದರ ಬಹುಪಾಲು ಯಶಸ್ಸು ಕೆ.ವಿ. ಜಯರಾಂ ಅವರಿಗೆ ಸಲ್ಲಬೇಕು.

ಅರುಣರಾಗ ಚಿತ್ರದಲ್ಲಿ ಅನಂತನಾಗ್, ಗೀತಾ ಮುಖ್ಯ ಭೂಮಿಕೆಯಲ್ಲಿರುವರು. ಕಥಾನಾಯಕ ಒಣಪ್ರತಿಷ್ಠೆಯ ಭ್ರಮೆಗೆ ಒಳಗಾದ ಸಂದರ್ಭ. ಭ್ರಮನಿರಸನವಾದ ಮೇಲೆ ಆತನಿಗೆ ಉಂಟಾಗುವ ಪಶ್ಚಾತ್ತಾಪ. ಇವು ಪರಿಣಾಮಕಾರಿಯಾಗಿ ಕೆ.ವಿ. ಜಯರಾಂ ಅವರ ನಿರ್ದೇಶನ ಕೌಶಲ್ಯದಿಂದ ಮೂಡಿಬಂದಿದೆ. ಹೊಸನೀರು ಚಿತ್ರ ಎಲ್ಲ ಜನರಿಗೂ ಪ್ರಿಯವಾದ ಚಿತ್ರವಾಗಿದೆ. ಇಲ್ಲಿನ ಕಥಾ ವಸ್ತುವಿನಲ್ಲಿ ಮೂಢ ಸಂಪ್ರದಾಯದ ವಿರುದ್ಧ ಗುರಿಸಾಧನೆಗಾಗಿ ನಡೆಸುವ ಪ್ರಗತಿಪರ ಹೋರಾಟದ ಚಿತ್ರಣದಲ್ಲಿ ನಿರ್ದೇಶಕರ ಅಪೂರ್ವ ಪ್ರತಿಭೆಯ ನೈಪುಣ್ಯತೆಯನ್ನು ಕಾಣಬಹುದು. ಮತ್ಸರ ಅಂಬರೀಷ್ ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ. ಕೆ.ವಿ. ಜಯರಾಂ ಅವರೇ ಹೇಳುವಂತೆ ಮತ್ಸರ ಅವರ ನಿರ್ದೇಶನದ ವಿಭಿನ್ನ ಚಿತ್ರಗಳಲ್ಲೊಂದಾಗಿದೆ. ಸಿರಿವಂತಿಕೆ, ಅಂತಸ್ತುಗಳ ಅಮಲಿನಿಂದ ಉನ್ಮತ್ತರಾದ ಕೈಗಾರಿಕೋದ್ಯಮಿಯೊಬ್ಬನ ಅವಿವೇಕ ನಡವಳಿಕೆ, ಅದರಿಂದಾದ ದುಷ್ಪರಿಣಾಮಗಳ ಹಂದರದಲ್ಲಿ ಸಾಗುವ ಚಿತ್ರ. ಈ ಚಿತ್ರಕ್ಕೆ ಕೆ.ವಿ. ಜಯರಾಂ ನಿರ್ದೇಶನದ ವಿಶೇಷ ಸಂಸ್ಪರ್ಶ ಮೆರಗು ತಂದಿದೆ.

ಶರವೇಗದ ಸರದಾರ ಕನ್ನಡದ ಮೊದಲ 70 ಎಂ.ಎಂ. ಚಿತ್ರ. ಈ ಚಿತ್ರವನ್ನು ಕಾಶ್ಮೀರ ಹಾಗೂ ಮಾರಿಷಸ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಕುಮಾರ ಬಂಗಾರಪ್ಪ ಈ ಚಿತ್ರದ ನಾಯಕ ನಟರು. ಮಾಧುರಿ ಕೆ.ವಿ. ಜಯರಾಂ ಅವರ ಭಾವಪ್ರಧಾನವಾದ ಚಿತ್ರ. ಇದೊಂದು ಗುಣಾತ್ಮಕ ಚಿತ್ರವಾಗಿ ಪ್ರೇಕ್ಷಕರ ಮನಸೂರೆಗೊಂಡಿದೆ. ಇದು ಜನಪ್ರಿಯ ಕಾದಂಬರಿಕಾರ್ತಿ ಸಾಯಿಸುತೆ ಅವರ ಕಾದಂಬರಿ ಆಧಾರಿತ ಚಿತ್ರ. ನನ್ನ ಮಾಧುರಿ ಚಿತ್ರ ನೋಡಿದವರು ಯಾರೂ ಚೆನ್ನಾಗಿಲ್ಲವೆಂದು ಹೇಳಿಲ್ಲ ಎಂಬುದಾಗಿ ಜಯರಾಂ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬೆತ್ತಲೆ ಸೇವೆ ಜ್ವಲಂತ ಸಾಮಾಜಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಇದರಲ್ಲಿ ಅನಂತನಾಗ್, ಮಂಜುಳಾ, ಲೋಕೇಶ್, ವಜ್ರಮುನಿ ಮೊದಲಾದವರ ಗಮನಾರ್ಹ ಅಭಿನಯವಿದ್ದು, ಈ ಚಿತ್ರದ ಮೂಲಕ ವಜ್ರಮುನಿ ಶ್ರೇಷ್ಠ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಚಿತ್ರದಲ್ಲಿ ಕೆ.ವಿ. ಜಯರಾಂ ಅವರ ಸಾಮಾಜಿಕ ಕಳಕಳಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ, ಕೆ.ವಿ. ಜಯರಾಂ ಅವರ ‘ಹೊಸರಾಗ’ ಚಿತ್ರದಲ್ಲಿ ಹಿಂದಿ ಜನಪ್ರಿಯ ನಟ ಪ್ರಾಣ್ ಅಭಿನಯಿಸಿದ್ದಾರೆ.

ವರದಕ್ಷಿಣೆ ಸಮಸ್ಯೆ, ಹೆಣ್ಣಿನ ಶೋಷಣೆಗಳ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದು ಸರ್ವ ಜನಾದರಣೀಯವಾದ ಚಿತ್ರ ‘ರಂಜಿತಾ’. ಈ ಚಿತ್ರ ಅವರಿಗೆ ಅದ್ಭುತ ಯಶಸ್ಸನ್ನು ತಂದುಕೊಟ್ಟಿತು. ಅವರು ಪ್ರತಿಬಾರಿ ಚಿತ್ರ ನಿರ್ದೇಶಿಸುವಾಗಲೂ ಹೊಸ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡುವರು. ಅವರೇ ಹೇಳುವಂತೆ ಪ್ರತಿಬಾರಿ ನನ್ನ ಚಿತ್ರಗಳಿಗೆ ಹೊಸಬರನ್ನೇ ಹುಡುಕುತ್ತೇನೆ. ಆಸಕ್ತಿಯಿಂದ ಅಭಿನಯವನ್ನು ಕಲಿಯುವಂತಹ ಕಲಾವಿದರು ಬೇಕು ಎನ್ನುತ್ತಾರೆ. ಆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳಕಿಗೆ ತರಬೇಕೆನ್ನುವುದು ಶ್ಲಾಘನೀಯವಾದುದು. ಇವರು ವಿಶೇಷವಾಗಿ ಲೇಖಕಿಯರ ಕಾದಂಬರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಇವರಿಗೆ ಮನಮಿಡಿಯುವ ಕಥೆಗಳೆಂದರೆ ತುಂಬಾ ಇಷ್ಟ. ಅಂಥ ಕಥೆಗಳು ಲೇಖಕಿಯರ ಕಾದಂಬರಿಗಳಲ್ಲಿ ಇರುವುದರಿಂದ ಅವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಮೂಲತಃ ನಾನು ಭಾವಜೀವಿ. ಆ ಕಾರಣಕ್ಕಾಗಿಯೇ ಹೆಚ್ಚು ಸೆಂಟಿಮೆಂಟ್‌ಗಳಿರುವ ಕೃತಿಗಳನ್ನು ಆರಿಸುತ್ತೇನೆ ಎಂಬುದಾಗಿ ಜಯರಾಂ ಅವರೇ ಹೇಳುತ್ತಾರೆ. ಸರಳತೆ, ವಿನಯ, ಸೌಜನ್ಯಗಳ ಸಾಕಾರ ಮೂರ್ತಿಯಾದ ಇವರ ಅದ್ವಿತೀಯ ಸಾಧನೆಗಾಗಿ ಹಲವಾರು ಮಹತ್ವದ ಗೌರವ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಇವರಿಗೆ ಅಖಿಲ ಭಾರತ ಅಂಬರೀಷ್ ಸಾಹಿತ್ಯ ಪ್ರಕಾಶನದಿಂದ ಶಂಕರ್‌ಸಿಂಗ್ ಗೌರವ ಪ್ರಶಸ್ತಿ ದೊರೆತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News