ಆನ್‌ಲೈನ್ ಅಪಾಯಗಳಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಮಾರ್ಗಗಳು ಇಲ್ಲಿವೆ

Update: 2018-08-26 11:12 GMT

ವಾಟ್ಸ್‌ಆ್ಯಪ್ ಆಧರಿತ ಆಟ ‘ಮೊಮೊ ಚಾಲೆಂಜ್’ ಈಗಾಗಲೇ ಭಾರತದಲ್ಲಿ ತನ್ನ ಮೊದಲ ಬಲಿ ತೆಗೆದುಕೊಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೊಮೊ ಚಾಲೆಂಜ್ ಕಳೆದ ವರ್ಷ ವಿಶ್ವಾದ್ಯಂತ ಹಲವಾರು ಎಳೆಯ ಜೀವಗಳನ್ನು ಆಹುತಿ ಪಡೆದಿದ್ದ ಮಾರಣಾಂತಿಕ ಆನ್‌ಲೈನ್ ಗೇಮ್ ‘ಬ್ಲೂ ವೇಲ್ ಚಾಲೆಂಜ್’ ಅನ್ನು ನೆನಪಿಸುತ್ತಿದೆ. ಸಾಮಾನ್ಯವಾಗಿ ಇಂತಹ ಸುದ್ದಿಗಳು ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತದೆ ಮತ್ತು ಮಕ್ಕಳ ಪೋಷಕರನ್ನು ತಾವೇನು ಮಾಡಬೇಕು ಎಂಬ ಚಿಂತೆಗೆ ತಳ್ಳುತ್ತವೆ.

ಮೊಮೊ ಚಾಲೆಂಜ್‌ನಿಂದ ಭಾರತದಲ್ಲಿ ಸಾವು ಸಂಭವಿಸಿರುವುದಕ್ಕೆ ಸ್ಪಷ್ಟವಾದ ಸಾಕ್ಷಾಧಾರ ಇನ್ನೂ ಲಭಿಸಿಲ್ಲವಾದರೂ ಇಂತಹ ವರದಿಗಳು ಹಲವಾರು ಪ್ರಶ್ನೆಗಳನ್ನೆತ್ತಿವೆ.

ಮಕ್ಕಳು ಇಂತಹ ಅಪಾಯಗಳಿಗೆ ಗುರಿಯಾಗದಂತೆ ನೋಡಿಕೊಳ್ಳುವ ಹೊಣೆ ಖಂಡಿತವಾಗಿಯೂ ಪೋಷಕರದ್ದಾಗಿದೆ. ಡಿಜಿಟಲ್ ಜಗತ್ತಿಗೆ ಮಕ್ಕಳ ಪ್ರವೇಶದ ಮೇಲೆ ನಿಗಾಯಿರಿಸುವ ಜೊತೆಗೆ ಕೆಲವು ನಿರ್ಬಂಧಗಳೂ ಅಗತ್ಯವಾಗಿವೆ. ಮಕ್ಕಳ ವರ್ತನೆಗಳಲ್ಲಿ ಬದಲಾವಣೆಗಳು ಕಂಡುಬಂದರೆ ಪೋಷಕರು ಎಚ್ಚೆತ್ತುಕೊಳ್ಳಲೇಬೇಕು. ಈ ವಿಷಯದಲ್ಲಿ ಮನಃಶ್ಶಾಸ್ತ್ರಜ್ಞರು ಏನು ಹೇಳುತ್ತಾರೆ?

  ಇಂದಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ನಿಂದಾಗಿ ಡಿಜಿಟಲ್ ಜಗತ್ತು ಸುಲಭದಲ್ಲಿ ಲಭ್ಯವಾಗುತ್ತಿದೆ ಮತ್ತು ವಿವಿಧ ಆನ್‌ಲೈನ್ ಗೇಮ್‌ಗಳು ಅವರ ಬೆರಳ ತುದಿಗಳಲ್ಲಿಯೇ ಇರುತ್ತವೆ. ಆಡ್ರಿನಾಲಿನ್ ಹಾರ್ಮೋನ್‌ನ ಏಕಾಏಕಿ ಸ್ರವಿಸುವಿಕೆ ಮತ್ತು ಸವಾಲುಗಳನ್ನು ಎತ್ತಿಕೊಳ್ಳುವ ತುಡಿತ ಅವರು ಇಂತಹ ಆಟಗಳಿಗೆ ದಾಸರಾಗುವಂತೆ ಮಾಡುತ್ತದೆ. ಆಟಗಳೊಂದಿಗೆ ಸಾಮಾಜಿಕ ಮಾಧ್ಯಮಗಳಿಂದಾಗಿ ಮಕ್ಕಳನ್ನು ಅಪರಿಚಿತ ವ್ಯಕ್ತಿಗಳು ಸುಲಭವಾಗಿ ಸಂಪರ್ಕಿಸುತ್ತಾರೆ ಮತ್ತು ಮಕ್ಕಳನ್ನು ಕೆಟ್ಟಕಾರ್ಯಗಳಿಗೆ ಪ್ರಚೋದಿಸುವ ಸಾಧ್ಯತೆಯಿರುತ್ತದೆ.

ಹೀಗಾಗಿ ಮಕ್ಕಳ ಮೊಬೈಲ್ ಜಗತ್ತಿನಲ್ಲಿ ಮಧಪ್ರವೇಶಿಸಿ ಅವರು ಫೋನಿಗೆ ದಾಸರಾಗುವುದನ್ನು ತಡೆಯುವ ಮತ್ತು ಅವರಿಗೆ ಕೆಲವು ತಳಮಟ್ಟದ ನಿಯಮಗಳನ್ನು ರೂಪಿಸುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಮಕ್ಕಳು ಆನ್‌ಲೈನ್‌ನಲ್ಲಿ ಸುರಕ್ಷಿತರಾಗಿರುವಂತೆ ಮಾಡಲು ಮತ್ತು ಮೊಮೊ ಚಾಲೆಂಜ್‌ಗಳಂತಹ ಅಪಾಯಕಾರಿ ಗೇಮ್‌ಗಳಿಂದ ಅವರನ್ನು ರಕ್ಷಿಸಲು ನೆರವಾಗಬಲ್ಲ ಕೆಲವು ಟಿಪ್ಸ್ ಇಲ್ಲಿವೆ.....

►ಸಾಧನಗಳ ಬಳಕೆಯ ಮೇಲೆ ನಿಗಾಯಿರಲಿ

ಶಾಲೆಯ ಪ್ರಾಜೆಕ್ಟ್‌ಗಳಾಗಿರಲಿ ಅಥವಾ ಸುರಕ್ಷತಾ ಕಾಳಜಿಗಳಾಗಿರಲಿ,ಇಂದಿನ ಮಕ್ಕಳು ಮೊಬೈಲ್ ಫೋನ್‌ಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಆದರೆ ದಿನದ 24 ಗಂಟೆಯೂ ಗೇಮ್‌ಗಳನ್ನು ಆಡುವದು,ಬ್ರೌಸಿಂಗ್ ಅಥವಾ ಚಾಟಿಂಗ್ ಒಳ್ಳೆಯದಲ್ಲ. ಆದ್ದರಿಂದ ಮಕ್ಕಳು ಮೊಬೈಲ್ ಪೋನ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ನಿಗಾಯಿರಿಸುವುದು ಪೋಷಕರ ಕರ್ತವ್ಯವಾಗಿದೆ. ಸಾಧ್ಯವಾದರೆ ಕಟ್ಟುನಿಟ್ಟಾದ ಉಸ್ತುವಾರಿಯಡಿ ಅವರು ಫೋನ್‌ಗಳನ್ನು ಬಳಸುವಂತೆ ನೋಡಿಕೊಳ್ಳುವುದು ಒಳ್ಳೆಯದು.

►ಮಕ್ಕಳಿಗೆ ಸ್ಮಾರ್ಟ್ ಫೋನ್ ಬೇಡ

 ಮಕ್ಕಳಿಗೆ ಸ್ಮಾರ್ಟ್‌ಫೋನ್ ಬದಲು ಕರೆ ಮಾಡಲು ಮತ್ತು ಸಂದೇಶಗಳನ್ನು ರವಾನಿಸಲು ಸಾದಾ ಫೋನ್ ಕೊಡಿಸುವುದು ಪೋಷಕರು ಮಾಡಬಹುದಾದ ಅತ್ಯುತ್ತಮ ಕೆಲಸವಾಗಿದೆ. ಏಕೆಂದರೆ ಸ್ಮಾರ್ಟ್‌ಫೋನ್‌ಗಳು ಮಕ್ಕಳು ಮಾರಣಾಂತಿಕ ಆನ್‌ಲೈನ್ ಗೇಮ್‌ಗಳಿಗೆ ಬಲಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಸ್ಮಾರ್ಟ್‌ಫೋನ್ ಕೊಡಿಸಲು ಬಯಸಿದ್ದರೆ ಅಗತ್ಯವಾದ ಆ್ಯಪ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಅಲ್ಲದೆ ಮಕ್ಕಳು ಅನಪೇಕ್ಷಿತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದನ್ನು ತಡೆಯಲು ಸಾಫ್ಟ್‌ವೇರ್‌ನ್ನು ಇನಸ್ಟಾಲ್ ಮಾಡಿ,ಬ್ರೌಸಿಂಗ್‌ನ ಮೇಲೆ ನಿಗಾಯಿರಿಸುವುದು ಬುದ್ಧಿವಂತಿಕೆಯಾಗುತ್ತದೆ.

►ರಾತ್ರಿ ಮೊಬೈಲ್ ಬ್ರೌಸಿಂಗ್‌ಗೆ ಅವಕಾಶ ಬೇಡ

 ಮಕ್ಕಳಿಗೆ ಒಳ್ಳೆಯ ನಿದ್ರೆ ಮುಖ್ಯವಾಗುತ್ತದೆ. ಇದರಿಂದ ಮಕ್ಕಳು ಚುರುಕಾಗುತ್ತಾರೆ ಮತ್ತು ಅವರ ಮನಸ್ಸು ಹಾಗೂ ಶರೀರಕ್ಕೆ ಅಗತ್ಯವಾದ ವಿಶ್ರಾಂತಿ ದೊರೆಯುತ್ತದೆ. ಆದ್ದರಿಂದ ರಾತ್ರಿ ಮಲಗುವ ವೇಳೆಯಲ್ಲಿ ಮೊಬೈಲ್ ಬ್ರೌಸಿಂಗ್‌ಗೆ ಅವಕಾಶ ನೀಡಲೇಬಾರದು. ನಿದ್ರಿಸುವಾಗ ಮೊಬೈಲ್‌ನ್ನು ಮಕ್ಕಳಿಂದ ದೂರವಿರಿಸುವುದು ಜಾಣತನವಾಗುತ್ತದೆ.

►ಪೋಷಕರು ಸ್ವತಃ ಮಾದರಿಯಾಗಬೇಕು

ಮಕ್ಕಳು ಹೆಚ್ಚಿನ ವಿಷಯಗಳನ್ನು ತಮ್ಮ ಹೆತ್ತವರು ಮತ್ತು ಕುಟುಂಬ ಸದಸ್ಯರಿಂದಲೇ ಕಲಿತುಕೊಳ್ಳುತ್ತಾರೆ. ಹೀಗಾಗಿ ಮಕ್ಕಳು ಮೊಬೈಲ್ ಫೋನ್‌ನ್ನು ಹಿತಮಿತವಾಗಿ ಬಳಸಬೇಕು ಎಂದು ಪೋಷಕರು ಬಯಸಿದ್ದರೆ ಅವರು ಸ್ವತಃ ಮಾದರಿಯಾಗಬೇಕು. ಹೀಗಾಗಿ ಮನೆಯಲ್ಲಿ ಮೊಬೈಲ್‌ನ್ನು ಅತಿಯಾಗಿ ಬಳಸುವುದರಿಂದ ಅವರೂ ದೂರವಿರಬೇಕಾಗುತ್ತದೆ.

►ಅರಿವು ಮೂಡಿಸುವುದು ಅಗತ್ಯ

ಮಕ್ಕಳು ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಬಳಕೆಯಿಂದ ಮಾತ್ರವಲ್ಲ,ಶಾಲೆಗಳಲ್ಲಿ ಮತ್ತು ಸ್ನೇಹಿತರ ಮೂಲಕವೂ ಡಿಜಿಟಲ್ ಜಗತ್ತಿನ ಸಂಪರ್ಕದಲ್ಲಿರುತ್ತಾರೆ ಎನ್ನುವುದನ್ನು ಮರೆಯಕೂಡದು. ಮಕ್ಕಳನ್ನು ಮತ್ತು ಹದಿಹರೆಯದವರನ್ನು ಬೈಯ್ದು ಅವರಿಂದ ಮೊಬೈಲ್ ಫೋನ್‌ನ್ನು ಕಿತ್ತುಕೊಳ್ಳುವ ಬದಲು ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಅವರಿಗೆ ತಿಳುವಳಿಕೆ ನೀಡುವುದು ಮುಖ್ಯವಾಗುತ್ತದೆ.

►ಗ್ಯಾಜೆಟ್‌ಗಳನ್ನು ಉಡುಗೊರೆಯಾಗಿ ನೀಡುವುದು ಬೇಡ

ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದರೆ ಅಥವಾ ಸಾಧನೆಯನ್ನೇನಾದರೂ ಮಾಡಿದರೆ ಅವರಿಗೆ ಹೊಸ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಗ್ಯಾಜೆಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಇದು ಸರಿಯಲ್ಲ. ಮೊಬೈಲ್ ಫೋನ್ ಅಗತ್ಯ ವಸ್ತುವಾಗಿದ್ದರೂ ಅದು ದೀರ್ಘಾವಧಿಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿಗೆ ತಳ್ಳುತ್ತದೆ. ವೀಡಿಯೊ ಗೇಮ್‌ಗಳು, ಟ್ಯಾಬ್ಲೆಟ್‌ಗಳು,ಮ್ಯೂಸಿಕ್ ಪ್ಲೇಯರ್‌ಗಳು ಸೇರಿದಂತೆ ಎಲ್ಲ ಗ್ಯಾಜೆಟ್‌ಗಳಿಗೂ ಈ ನಿಯಮ ಅನ್ವಯವಾಗಲಿ.

►ಮಕ್ಕಳೊಂದಿಗೆ ಮಾತುಕತೆ ಮುಖ್ಯ

ಪ್ರತಿದಿನದ ಶಾಲಾ ಚಟುವಟಿಕೆಗಳ ಬಗ್ಗೆ ಮತ್ತು ಶಾಲೆಯಲ್ಲಿ ಅವರಿಗೆ ಹೇಗೆ ಅನಿಸುತ್ತದೆ ಎನ್ನುವ ಕುರಿತು ಮಕ್ಕಳೊಡನೆ ಮಾತನಾಡುತ್ತಿರಬೇಕು. ಇದರಿಂದ ಪೋಷಕರಿಗೆ ಮಕ್ಕಳ ಆಸಕ್ತಿಗಳು,ಚಿಂತನೆಗಳು,ನಡವಳಿಕೆಗಳನ್ನು ಅಂದಾಜಿಸಲು ಸಾಧ್ಯವಾಗುತ್ತದೆ ಮತ್ತು ಅವರಲ್ಲಿ ಮಾನಸಿಕ ಕುಸಿತ ಅಥವಾ ಖಿನ್ನತೆಯ ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬಹುದಾಗಿದೆ. ಮಕ್ಕಳ ನಡವಳಿಕೆಯಲ್ಲಿ ವಿಲಕ್ಷಣವಾದುದೇನಾದರೂ ಕಂಡು ಬಂದರೆ ಅವರ ಶಾಲಾ ಶಿಕ್ಷಕರು ಮತ್ತು ಕೌನ್ಸೆಲರ್ ಜೊತೆ ಮಾತನಾಡಬೇಕಾಗುತ್ತದೆ. ಇನ್ನು ಮೊಬೈಲ್ ಬಳಕೆಯ ವಿಷಯಕ್ಕೆ ಬಂದರೆ ಮಕ್ಕಳನ್ನು ಅದರಿಂದ ಸಂಪೂರ್ಣವಾಗಿ ತಡೆಯಬೇಕಿಲ್ಲ,ಆದರೆ ಪೋನ್ ಬಳಕೆಯು ಹಿತಮಿತವಾಗಿರಬೇಕು ಎಂಬ ಪೋಷಕರ ನಿರ್ಧಾರ ಗಟ್ಟಿಯಾಗಿರಬೇಕು. ಮೊಬೈಲ್ ಬಳಕೆಯನ್ನು ಏಕಾಏಕಿ ನಿಷೇಧಿಸಬೇಕಿಲ್ಲ,ಆದರೆ ಕ್ರಮೇಣ ಅದರ ಬಳಕೆ ಕಡಿಮೆಯಾಗುವಂತೆ ನೋಡಿಕೊಂಡರೆ ಸಾಕು. ಅಲ್ಲದೆ ಇತರ ಹವ್ಯಾಸಗಳು ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಮಕ್ಕಳ ಗಮನವನ್ನು ತಿರುಗಿಸಬಹುದು.

ಮನೋವೈದ್ಯರನ್ನು ಯಾವಾಗ ಸಂಂಪರ್ಕಿಸಬೆಕು?

 ಭಾರತದಲ್ಲಿ ಮಾನಸಿಕ ಅಸ್ವಸ್ಥತೆ ಇಂದಿಗೂ ಸಾಮಾಜಿಕ ಕಳಂಕವಾಗಿರುವುದರಿಂದ ಹೆಚ್ಚಿನವರು ತಮ್ಮ ಮಕ್ಕಳನ್ನು ಮನೋವೈದ್ಯರ ಬಳಿಗೆ ಕರೆದೊಯ್ಯಲು ಹಿಂಜರಿಯುತ್ತಾರೆ. ಮಕ್ಕಳು ಸುಲಭಭೇದ್ಯರಾಗಿರುತ್ತಾರೆ ಮತ್ತು ಶಾಲೆಯಲ್ಲಿ ನಿಂದೆ,ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುವ ಭೀತಿ ಅಥವಾ ಪರೀಕ್ಷೆಯ ಒತ್ತಡದಂತಹ ವಿವಿಧ ಕಾರಣಗಳಿಂದಾಗಿ ಅತಿರೇಕದ ಕ್ರಮಗಳಿಗೆ ಮುಂದಾಗಬಹುದು. ಕೆಲವು ಸಂದರ್ಭಗಳಲ್ಲಿ ಮಕ್ಕಳಿಗೆ ಇವುಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಹೆಚ್ಚುವರಿ ನೆರವು ಅಗತ್ಯವಾಗಬಹುದು. ಆದ್ದರಿಂದ ಮಕ್ಕಳ ಮಾನಸಿಕ ಕುಸಿತಕ್ಕೆ ಕಾರಣಗಳನ್ನು ತಿಳಿದುಕೊಳ್ಳಲು ಮತ್ತು ಸೂಕ್ತ ಚಿಕಿತ್ಸೆ ಕೊಡಿಸಲು ಮನೋವೈದ್ಯರನ್ನು ಭೇಟಿಯಾಗಲೇಬೇಕು.

ಲಕ್ಷಣಗಳು: ಮಕ್ಕಳು ಹೆಚ್ಚಿನ ಸಮಯ ಒಂಟಿತನವನ್ನು ಬಯಸುತ್ತಿದ್ದರೆ, ಸದಾ ತನ್ನ ಕೋಣೆಯನ್ನು ಒಳಗಿನಿಂದ ಭದ್ರ ಪಡಿಸಿಕೊಳ್ಳುತ್ತಿದ್ದರೆ,ಕತ್ತಲಲ್ಲಿ ಇರುವುದನ್ನು ಹೆಚ್ಚು ಇಷ್ಟಪಡುತ್ತಿದ್ದರೆ, ಶಾಲೆಗೆ ಗೈರಾಗುತ್ತಿದ್ದರೆ, ತನಗೆ ಇಷ್ಟವಾದ ಯಾವುದೇ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯುತ್ತಿಲ್ಲವಾದರೆ, ಕುಟುಂಬದ ಸಮಾರಂಭಗಳಲ್ಲಿ ಭಾಗಿಯಾಗುವುದನ್ನು ಮತ್ತು ಸ್ನೇಹಿತರು ಹಾಗೂ ಬಂಧುಗಳನ್ನು ಭೇಟಿಯಾಗುವುದನ್ನು ಇಷ್ಟ ಪಡುತ್ತಿಲ್ಲವಾದರೆ, ಊಟ ಮಾಡಲು ಬಯಸುತ್ತಿಲ್ಲವಾದರೆ ಅಥವಾ ಒಬ್ಬನೇ ಕುಳಿತು ಊಟ ಮಾಡಲು ಬಯಸುತ್ತಿದ್ದರೆ,ಹಸಿವು ಕ್ಷೀಣಿಸಿದ್ದರೆ,ಆಗಾಗ್ಗೆ ವಿನಾಕಾರಣ ಕೆರಳುತ್ತಿದ್ದರೆ ಮತ್ತು ರಾತ್ರಿಗಳಲ್ಲಿ ಎಚ್ಚರವಾಗಿರುತ್ತಿದ್ದರೆ ಪೊಷಕರು ಖಂಡಿತವಾಗಿಯೂ ಮನೋವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News