ನಿಮ್ಮ ಬೆರಳುಗಳು ನಿರಿಗೆಗಟ್ಟುತ್ತಿವೆಯೇ ? ಕಾರಣಗಳಿಲ್ಲಿವೆ.....

Update: 2018-08-26 11:21 GMT

ಪಾತ್ರೆಗಳನ್ನು ತೊಳೆಯುವಾಗ,ಬಟ್ಟೆಗಳನ್ನು ಒಗೆಯುತ್ತಿದ್ದಾಗ ಅಥವಾ ಸ್ನಾನ ಮಾಡುತ್ತಿದ್ದಾಗ ಕೈಗಳು ನಿರಂತರವಾಗಿ ನೀರಿಗೆ ತೆರೆದುಕೊಂಡಿದ್ದರೆ ಬೆರಳುಗಳ ತುದಿಗಳು ನಿರಿಗೆಗಟ್ಟಿರುವುದನ್ನು ನೀವು ಗಮನಿಸಿರಬಹುದು. ನೆನೆದ ವಸ್ತುಗಳನ್ನು ಅಥವಾ ನೀರಿನಲ್ಲಿ ವಸ್ತುಗಳನ್ನು ಹಿಡಿದುಕೊಳ್ಳಲು ನಿರಿಗೆಗಟ್ಟಿದ ಬೆರಳುಗಳು ನೆರವಾಗಬಹುದು. ಕೈಗಳು ಮತ್ತು ಕಾಲುಗಳ ಬೆರಳುಗಳು ಸುದೀರ್ಘ ಸಮಯ ನೀರಿನ ಸಂಪರ್ಕದಲ್ಲಿದ್ದರೆ ಅವುಗಳ ತುದಿಗಳು ನಿರಿಗೆಗಟ್ಟುತ್ತವೆ. ಇದನ್ನು ‘ಪ್ರುನಿ ಫಿಂಗರ್ಸ್’ ಎಂದು ಕರೆಯಲಾಗುತ್ತದೆ. ಆದರೆ ಬೆರಳುಗಳು ನೀರಿನಲ್ಲಿ ಮುಳುಗಿರದಿದ್ದಾಲೂ ನಿರಿಗೆಗಟ್ಟಿದ್ದರೆ ಅದು ಅನಾರೋಗ್ಯದ ಲಕ್ಷಣವಾಗಿರಬಹುದು.

ನರಮಂಡಲ ವ್ಯವಸ್ಥೆಯು ಸಂಕುಚಿತಗೊಳ್ಳುವಂತೆ ರಕ್ತನಾಳಗಳಿಗೆ ಸಂದೇಶವನ್ನು ರವಾನಿಸಿದಾಗ ಬೆರಳುಗಳ ತುದಿಗಳು ನಿರಿಗೆಗಟ್ಟುತ್ತವೆ. ಸಂಕುಚಿತ ರಕ್ತನಾಳಗಳು ಬೆರಳತುದಿಗಳ ಗಾತ್ರವನ್ನು ಸ್ವಲ್ಪ ಕುಗ್ಗಿಸುತ್ತವೆ,ಇದರಿಂದಾಗಿ ಚರ್ಮವು ಮಡಿಕೆಗೊಂಡು ನಿರಿಗೆಗಳು ಉಂಟಾಗುತ್ತವೆ. ಬೆರಳ ತುದಿಗಳು ನಿರಿಗೆಗಟ್ಟಲು ವೈದ್ಯಕೀಯ ಕಾರಣಗಳಿಲ್ಲಿವೆ...

►ನಿರ್ಜಲೀಕರಣ

ನಾವು ಸಾಕಷ್ಟು ನೀರನ್ನು ಕುಡಿಯದಿದ್ದಾಗ ಚರ್ಮವು ಸ್ವಲ್ಪ ಪ್ರಮಾಣದಲ್ಲಿ ತನ್ನ ಸ್ಥಿತಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುತ್ತದೆ ಮತ್ತು ನಿರಿಗೆಗಳು ಮೂಡುತ್ತವೆ. ನಿರ್ಜಲೀಕರಣದಿಂದಾಗಿ ಚರ್ಮವು ಒಣಗಿರುವಂತೆ ಕಂಡುಬರುತ್ತದೆ.

►ಮಧುಮೇಹ

ಮಧುಮೇಹವು ರಕ್ತದಲ್ಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಶರೀರದ ಕಾರ್ಯ ನಿರ್ವಹಣೆಗೆ ತೊಡಕನ್ನುಂಟು ಮಾಡುತ್ತದೆ. ಯಾವುದೇ ವಿಧದ ಮಧುಮೇಹದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವು ಅಧಿಕವಾದಾಗ ಅದು ಬೆರಳುಗಳು ನಿರಿಗೆಗಟ್ಟಲು ಕಾರಣವಾಗುತ್ತದೆ. ಅದು ಬೆವರು ಗ್ರಂಥಿಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಬೆವರಿನ ಕೊರತೆಯು ಚರ್ಮದ ಒಣಗುವಿಕೆಗೆ ಕಾರಣವಾಗುತ್ತದೆ.

►ಕಜ್ಜಿ

ಕಜ್ಜಿಯು ಚರ್ಮದ ಸಮಸ್ಯೆಯಾಗಿದ್ದು,ಚರ್ಮದ ಉರಿಯೂತ, ತುರಿಕೆ, ಕೆಂಪಾಗುವಿಕೆ ಮತ್ತು ದದ್ದುಗಳಿಗೆ ಕಾರಣವಾಗುತ್ತದೆ. ಈ ರೋಗವು ಚರ್ಮವನ್ನು ಒಣಗಿಸಿ,ಅದು ನಿರಿಗೆಗಟ್ಟುವಂತೆ ಮಾಡುತ್ತದೆ.

►ರೇನಾಡ್ಸ್ ಕಾಯಿಲೆ

ಇದು ಕೈಬೆರಳು ಮತ್ತು ಕಾಲ್ಬೆರಳುಗಳು ಸೇರಿದಂತೆ ಶರೀರದ ಅತ್ಯಂತ ಚಿಕ್ಕ ಭಾಗಗಳಿಗೆ ರಕ್ತವನ್ನು ಪೂರೈಸುವ ಸಣ್ಣ ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುವ ರೋಗವಾಗಿದೆ. ನಾವು ಅತ್ಯಂತ ಹೆಚ್ಚಿನ ಚಳಿಗೆ ಒಡ್ಡಿಕೊಂಡಾಗ ಈ ರೋಗವು ಕಾಣಿಸಿಕೊಳ್ಳುತ್ತದೆ. ಬೆರಳುಗಳು ಬಿಳಿ ಅಥವಾ ನೀಲಿ ಬಣ್ಣಕ್ಕೆ ತಿರುಗುವುದು, ಮರಗಟ್ಟುವಿಕೆ ಮತ್ತು ಜುಮುಗುಡುವಿಕೆ ಇದರ ಲಕ್ಷಣಗಳಾಗಿವೆ.

►ಥೈರಾಯ್ಡ ಕಾಯಿಲೆ

 ಥೈರಾಯ್ಡ ಕಾಯಿಲೆಯಿರುವವರಲ್ಲಿ ನಿರಿಗೆಗಟ್ಟಿದ ಬೆರಳುಗಳು ಮತ್ತು ಚರ್ಮದಲ್ಲಿ ದದ್ದುಗಳು ಉಂಟಾಗಬಹುದು. ಹೈಪೊಥೈರಾಯ್ಡಿಸಂ ಚಯಾಪಚಯವನ್ನು ನಿಧಾನಗೊಳಿಸಿ ಶರೀರದ ಉಷ್ಣತೆಯನ್ನು ತಗ್ಗಿಸುವುದರಿಂದ ಬೆರಳುಗಳನ್ನು ನಿರಿಗೆಗಟ್ಟಿಸುವ ಹೆಚ್ಚಿನ ಸಾಧ್ಯತೆಯಿರುತ್ತದೆ ಎನ್ನುವುದು ಹೆಚ್ಚಿನ ತಜ್ಞರ ಅಭಿಪ್ರಾಯವಾಗಿದೆ. ಶರೀರದ ಉಷ್ಣತೆ ಕಡಿಮೆಯಾದಾಗ ಬೆರಳುಗಳಲ್ಲಿಯ ರಕ್ತನಾಳಗಳು ಉಷ್ಣತೆಯ ನಷ್ಟವನ್ನು ತಡೆಯಲು ಸಂಕುಚಿತಗೊಳ್ಳುತ್ತವೆ ಮತ್ತು ಚರ್ಮವು ನಿರಿಗೆಗಟ್ಟುತ್ತದೆ.

►ಲಿಂಫೆಡೆಮಾ

 ತೋಳುಗಳು ಮತ್ತು ಕಾಲುಗಳಲ್ಲು ಊತವುಂಟಾದಾಗ ಲಿಂಫೆಡೆಮಾ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್‌ಗೆ ಚಿಕಿತ್ಸೆ ಸಂದರ್ಭದಲ್ಲಿ ದುಗ್ಧಗ್ರಂಥಿಗಳಿಗೆ ಹಾನಿಯಾಗಿದ್ದರೆ ಅಥವಾ ಅವುಗಳನ್ನು ತೆಗೆದುಹಾಕಿದ್ದರೆ ದುಗ್ಧರಸ ವ್ಯವಸ್ಥೆಗೆ ತಡೆಯುಂಟಾದಾಗ ಈ ಊತ ಉಂಟಾಗುತ್ತದೆ. ದುಗ್ಧರಸವು ಸರಿಯಾಗಿ ಹರಿದು ಹೋಗದೆ ಶೇಖರಗೊಳ್ಳುವುದು ಊತಕ್ಕೆ ಕಾರಣವಾಗುತ್ತದೆ. ಇದು ಬೆರಳುಗಳ ಮೇಲೆ ಪರಿಣಾಮ ಬೀರಿ ನಿರಿಗೆಗಳನ್ನುಂಟು ಮಾಡುತ್ತದೆ.

►ವೈದ್ಯರನ್ನು ಯಾವಾಗ ಕಾಣಬೇಕು?

ನೀರಿನ ಸಂಪರ್ಕದಿಂದ ಬೆರಳುಗಳು ನಿರಿಗೆಗಟ್ಟಿದ್ದರೆ ಚಿಂತಿಸಬೇಕಿಲ್ಲ,ಏಕೆಂದರೆ ಸ್ವಲ್ಪ ಸಮಯದ ಬಳಿಕ ಒಣಗಿದ ನಂತರ ಚರ್ಮವು ಮೊದಲಿನ ಸ್ಥಿತಿಗೆ ಮರಳುತ್ತದೆ. ಆದರೆ ನೀರಿನ ಸಂಪರ್ಕವಿಲ್ಲದೆ ಬೆರಳು ನಿರಿಗೆಗಟ್ಟಿದ್ದರೆ ಅದಕ್ಕೆ ಮೇಲಿನ ಕಾಯಿಲೆಗಳು ಕಾರಣವಾಗಿರಬಹುದು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News