ವಿಕಲಚೇತನ ನೌಕರರ ಉಚಿತ ಬಸ್‌ಪಾಸ್ ರದ್ದು ಸಲ್ಲ: ಆಯುಕ್ತ ವಿ.ಎಸ್.ಬಸವರಾಜು
ಬೆಂಗಳೂರು, ಆ. 26: ಸರಕಾರಿ ವಿಕಲಚೇತನ ನೌಕರರ ಉಚಿತ ಬಸ್‌ಪಾಸ್ ಸೌಲಭ್ಯವನ್ನು ರದ್ದು ಮಾಡಿರುವುದು ಸರಿಯಲ್ಲ. ಈ ಬಗ್ಗೆ ಪುನರ್ ಪರಿಶೀಲಿಸಿ ಉಚಿತ ಬಸ್ ಪಾಸ್ ಸೌಲಭ್ಯವನ್ನು ಮುಂದುವರೆಸಬೇಕೆಂದು ಅಂಗವಿಕಲರ ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜು ಸರಕಾರಕ್ಕೆ ಮನವಿ ಮಾಡಿದ್ದಾರೆ.
ರವಿವಾರ ಕರ್ನಾಟಕ ರಾಜ್ಯ ಸಕರಾರಿ ಅಂಧ ನೌಕರರ ಸಂಘ ನಗರದ ಸಚಿವಾಲಯ ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಜಾಲತಾಣ ಲೋಕಾರ್ಪಣೆ ಹಾಗೂ ವಿಶೇಷ ಸಾಧನೆಗೈದ ಅಂಧ ಸರಕಾರಿ ನೌಕರರಿಗೆ ಸನ್ಮಾನ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರ ಕುಟುಂಬದ ನಿರ್ವಹಣೆ ಸಾಮಾನ್ಯ ಕುಟುಂಬಕ್ಕಿಂತ ಭಿನ್ನ. ಆರೋಗ್ಯ ನಿರ್ವಹಣೆಗೆ ಪ್ರತಿತಿಂಗಳು ಇಂತಿಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಇದರ ಜತೆಗೆ ವಿಕಲಚೇತನರ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಬೇಕಾದರೆ, ಮತ್ತೊಬ್ಬರು ಸಹಾಯ ಬೇಕಾಗುತ್ತದೆ. ಹೀಗಾಗಿ ಸರಕಾರಿ ವಿಕಲಚೇತನ ನೌಕರರಿಗೆ ಉಚಿತ ಬಸ್‌ಪಾಸ್ ನೀಡುವುದು ಅಗತ್ಯ ಎಂದು ಅವರು ಹೇಳಿದರು.
ಪ್ರಾಥಮಿಕ ತರಬೇತಿ ಅಗತ್ಯ: 2012ರಲ್ಲಿ ವಿಕಲಚೇತನರನ್ನು ಸರಕಾರಿ ಇಲಾಖೆಗಳಲ್ಲಿ ನೌಕರರನ್ನಾಗಿ ನೇಮಿಸಿಕೊಂಡಿತು. ಆದರೆ, ಇಲ್ಲಿಯವರಿಗೂ ವಿಕಲಚೇತನರಿಗೆ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತರಬೇತಿ ಸಿಕ್ಕಿಲ್ಲ. ಇದರಿಂದ ಇವರ ಪ್ರತಿಭೆಯನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ವಿಕಲಚೇತನ ನೌಕರರಿಗೆ ಪ್ರಾಥಮಿಕ ತರಬೇತಿ ನೀಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಅವರು ಆಶಿಸಿದರು.
ವಿಕಲಚೇತನ ನೌಕರರು ಕೇವಲ ಸರಕಾರಿ ಹುದ್ದೆಗಳನ್ನು ಪಡೆಯುವುದನ್ನೆ ಗುರಿಯಾಗಿಟ್ಟುಕೊಳ್ಳಬಾರದು. ಖಾಸಗಿ ಕ್ಷೇತ್ರದಲ್ಲಿ ವಿಫುಲವಾದ ಅವಕಾಶವಿದೆ. ಹಾಗೂ ಕಾನೂನಿನ ಪ್ರಕಾರ ಖಾಸಗಿ ಕಂಪೆನಿಗಳು ಅರ್ಹತೆ ಇರುವ ವಿಲಚೇತನರಿಗೆ ಕೆಲಸ ಕೊಡದೆ ಹಿಂದಕ್ಕೆ ಕಳುಹಿಸುವಂತ್ತಿಲ್ಲ. ಒಂದು ವೇಳೆ ಕೆಲಸ ಕೊಡದಿದ್ದರೆ, ಸೂಕ್ತ ಕಾರಣಗಳನ್ನು ಕೊಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಕಲಚೇತನರು ಖಾಸಗಿ ಕ್ಷೇತ್ರಗಳಲ್ಲಿರುವ ಹುದ್ದೆಗಳನ್ನು ಪಡೆಯುವುದಕ್ಕೆ ಹೆಚ್ಚಿನ ಗಮನ ಕೊಡಬೇಕೆಂದು ಅವರು ಹೇಳಿದರು.
ವಿಲಚೇತನರು ಎಲ್ಲ ಕ್ಷೇತ್ರಗಳಲ್ಲೂ ನೌಕರಿಯನ್ನು ಪಡೆಯುವಂತಾಗಬೇಕು. ಅದಕ್ಕೆ ಅಗತ್ಯವಾದ ನೆರವನ್ನು ಸರಕಾರಿ ಹಾಗೂ ಸಂಘ, ಸಂಸ್ಥೆಗಳು ನೀಡುವುದು ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಮತ್ತಷ್ಟು ಕೆಲಸಗಳು ಆಗಬೇಕಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ಮಾತನಾಡಿ, ಸರಕಾರಿ ನೌಕರಿಯನ್ನು ಪಡೆದಿರುವ ವಿಕಲಚೇತನರು ಕೇವಲ ತಮ್ಮ ಕುಟುಂಬಕ್ಕೆ ಸೀಮಿತಗೊಳ್ಳಬಾರದು. ಸಮಾಜದಲ್ಲಿರುವ ಇತರೆ ವಿಲಚೇತನರ ಬದುಕಿಗೆ ಆಸರೆಯಾಗಿ ನಿಲ್ಲಬೇಕಾಗುತ್ತದೆ ಎಂದು ತಿಳಿಸಿದರು.
ಸರಕಾರಿ ವಿಲಚೇತನರ ನೌಕರರು ಸಮಾಜದಲ್ಲಿರುವ ವಿಲಚೇತನ ಸಮುದಾಯ ಹಾಗೂ ಸರಕಾರದ ನಡುವೆ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಸರಕಾರ ಸೌಲಭ್ಯಗಳನ್ನು ಪ್ರತಿಯೊಬ್ಬ ವಿಕಲಚೇತನರಿಗೂ ಮುಟ್ಟಿಸುವ ನಿಟ್ಟಿನಲ್ಲಿ ಸರಕಾರಿ ವಿಲಚೇತನ ನೌಕರರ ಸಂಘಗಳು ಕಾರ್ಯ ಪ್ರವೃತ್ತವಾಗಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಡಾ.ನಾಗಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಬಸಯ್ಯ ಮಠಪತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಮ್.ಎನ್.ಪ್ರಶಾಂತ್, ನಿವೃತ್ತ ಪ್ರಾಧ್ಯಾಪಕ ಅರುಣಕುಮಾರ, ನಿವೃತ್ತ ಶಿಕ್ಷಕ ಸುರೇಶ ಎಂ.ಜೊರಾಪುರಿ ಅವರಿಗೆ ಸನ್ಮಾನಿಸಲಾಯಿತು.