×
Ad

ಹತ್ಯೆ ಸಂಸ್ಕೃತಿ ಇಂದಿಗೂ ಮುಂದುವರಿದಿದೆ: ಡಾ.ಎಚ್.ಎಸ್.ಅನುಪಮಾ

Update: 2018-08-26 22:27 IST

ಬೆಂಗಳೂರು, ಆ.26: ವ್ಯವಸ್ಥೆಯಲ್ಲಿರುವ ಅನಾಚಾರಗಳನ್ನು ಪ್ರಶ್ನಿಸುವವರನ್ನು ಪಟ್ಟಭದ್ರ ಹಿತಾಸಕ್ತಿಗಳು ಹತ್ಯೆ ಮಾಡುವ ಪರಿಪಾಠ ಇಂದಿಗೂ ಮುಂದುವರಿಯುತ್ತಿರುವುದು ವಿಪರ್ಯಾಸ ಎಂದು ಲೇಖಕಿ ಡಾ.ಎಚ್.ಎಸ್.ಅನುಪಮಾ ವಿಷಾಧ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕಪ್ಪಣ್ಣ ಅಂಗಳದಲ್ಲಿ ದೇಸಿ ಪುಸ್ತಕ ಪ್ರಕಾಶನದಿಂದ ಆಯೋಜಿಸಿದ್ದ ಮಮತ ಜಿ.ಸಾಗರ ಅವರ ಅನುವಾದಿತ ಕೃತಿ ‘ಪ್ರೀತಿಯ ನಲವತ್ತು ನಿಯಮಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಳುವ ವರ್ಗವನ್ನು ಹಾಗೂ ಸಮಾಜದಲ್ಲಿ ಅನಾಚಾರವನ್ನು ಪ್ರಶ್ನಿಸಿದರು ಎಂಬ ಕಾರಣಕ್ಕಾಗಿ 13ನೇ ಶತಮಾನದಲ್ಲಿ ಸಮಾಜಸುಧಾರಕ ಬಸವಣ್ಣರನ್ನು ಹತ್ಯೆ ಮಾಡಲಾಯಿತು. ಅಲ್ಲಿಂದ ಆರಂಭಗೊಂಡಿರುವ ಈ ಸಂಸ್ಕೃತಿ ಇಂದು ಸತ್ಯವನ್ನು ಬಯಲು ಮಾಡಿದರು ಎಂದು ನಾಡಿನ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ಧಾಬೋಲ್ಕರ್, ಪನ್ಸಾರೆ ಸೇರಿದಂತೆ ಅನೇಕರನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದರು.

ನಾಡಿನಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡುವ ಪ್ರಗತಿಪರ ಚಿಂತಕರ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ ಎಂದ ಅವರು, ಅಧಿಕಾರ ಹಿಂಸಾತ್ಮಕ ಹಾಗೂ ಅನೈತಿಕವಾಗದಿರಲು ಆಧ್ಯಾತ್ಮಿಕ ಬೆಳಕು ಬೇಕಿದೆ. ಪ್ರಗತಿಪರ ಮಠಾಧೀಶರಾದ ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ, ತೋಂಟದಾಚಾರ್ಯ ಸ್ವಾಮೀಜಿ, ಸಾಮಾಜಿಕ ಚಿಂತಕ ಸ್ವಾಮಿ ಅಗ್ನಿವೇಶ್ ಸೇರಿದಂತೆ ಅನೇಕರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

‘ಪ್ರೀತಿಯ ನಲವತ್ತು ನಿಯಮಗಳು’ ಕೃತಿಯು 13ನೆ ಶತಮಾನದಲ್ಲಿನ ರಾಜಕೀಯ ಮತ್ತು ಧಾರ್ಮಿಕ ಸಂಘರ್ಷವನ್ನು ತೋರಿಸುಕೊಡುತ್ತಿದೆ. ಅಲ್ಲದೆ, ಕೃತಿಯು ಎಲ್ಲವನ್ನೂ ಅವಸರವಾಗಿ ಮುಗಿಸಿಬಿಡಬೇಕು ಎಂಬ ಆತಂಕವಿಲ್ಲದೆ, ಎಲ್ಲವನ್ನು ವಿವರವಾಗಿ ಹೆಣೆದಿದ್ದಾರೆ. 13ನೆ ಶತಮಾನದಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತರ ನಡುವಿನ ಸಂಘರ್ಷದ ಸಮಯದಲ್ಲಿಯೂ ರೂಮಿಯೊ ಅಂತರ್ ಧರ್ಮೀಯ ವಿವಾಹ ಆಗುವ ಮೂಲಕ ಸೌಹಾರ್ದತೆಯನ್ನು ಮೆರೆದಿದ್ದಾರೆ. ಅದನ್ನು ಕೃತಿ ವಿವರಿಸಿದೆ ಎಂದು ಶ್ಲಾಘಿಸಿದರು.

ಅನುವಾದಕಿ ಮಮತಾ ಜಿ.ಸಾಗರ ಮಾತನಾಡಿ, ಧಾರ್ಮಿಕ ಮೂಲಭೂತವಾದ ಇಂದು ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಈ ವೇಳೆ ಪ್ರೀತಿಯ ಮಾತನಾಡುವುದು ಅತ್ಯವಶ್ಯಕ ಅನ್ನಿಸಿದ್ದರಿಂದ ಈ ಕೃತಿ ಅನುವಾದ ಮಾಡಲಾಗಿದೆ. ದೇಶದಲ್ಲಿ ಎಲ್ಲ ಧರ್ಮಗಳ ಎಲ್ಲ ಗಡಿಗಳನ್ನು ಮೀರಿ ಚಲಾವಣೆಯಲ್ಲಿ ಕಂಡು ಬರುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಸಾಂಕ್ರಾಮಿಕ ರೋಗದ ರೀತಿಯಲ್ಲಿ ಹಬ್ಬುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಕೆಲವರು ಬಹುತೇಕರನ್ನು ಏನನ್ನು ತಿನ್ನಬೇಕು, ಯಾವ ರೀತಿಯಲ್ಲಿ ಬಟ್ಟೆ ತೊಡಬೇಕು. ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ನಮ್ಮವರು ಯಾರು ಎಂಬುದನ್ನು ತೀರ್ಮಾನ ಮಾಡುತ್ತಿದ್ದಾರೆ. ಯಾವ ಭಾಷಾ ಸಾಹಿತ್ಯ ಯಾವ ಧರ್ಮದ ಜೊತೆಗೆ ಸಮೀಕರಣಗೊಳ್ಳಬೇಕು ಎಂಬ ಪೂರ್ವಾಗ್ರಹ ಪೀಡಿತರಾಗಿ ವಾದ ಮಾಡಲಾಗುತ್ತಿದೆ. ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಸಾಹಸಗಳು ಪ್ರಜಾಸತ್ತಾತ್ಮಕ ನಾಡಿನಲ್ಲಿ ಸಾಮಾನ್ಯವಾಗಿಬಿಟ್ಟಿದೆ ಎಂದು ತಿಳಿಸಿದರು.

ಈ ಕಾದಂಬರಿಯಲ್ಲಿ ಅಸಾಧಾರಣ ಘಟನೆಗಳು, ಪಾತ್ರಗಳು, ಸಂಬಂಧಗಳು, ಧಾರ್ಮಿಕ ಮೂಲಭೂತವಾದದ ಕುಮ್ಮಕ್ಕಿಗೊಳಗಾಗುವ ದ್ವೇಷಗಳು, ಈ ಎಲ್ಲ ಅಡೆತಡೆಗಳನ್ನೂ ಮೀರಿ ಗೋಚರಿಸುವ ಪ್ರೀತಿಯ ಹಾತೊರಿಕೆ, ಅಮಿತ ಪ್ರೇಮದ ಸಾಕ್ಷಾತ್ಕಾರ ಎಲ್ಲರಿಗೂ ತಕ್ಕಬೇಕೆಂಬ ನಿಟ್ಟಿನಲ್ಲಿ ಈ ಕೃತಿ ಅನುವಾದ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಥೆಗಾರ ವಿವೇಶ ಶಾನುಬೋಗ ಉಪಸ್ಥಿತರಿದ್ದರು.

‘ಜಗತ್ತಿನಲ್ಲಿ ಅನ್ನಕ್ಕಾಗಿ, ನೀರಿಗಾಗಿ, ವಾಸಿಸುವ ಸ್ಥಳಕ್ಕಾಗಿ ಬರಗಾಲವಿಲ್ಲ. ಆದರೆ, ವ್ಯಕ್ತಿಗಳ ನಡುವಿನ ಪ್ರೀತಿಗೆ ಹೆಚ್ಚು ಬರಗಾಲವಿದೆ. ಪ್ರೇಮಕ್ಕಿರುವ ಶಕ್ತಿ ಅಪಾರವಾದುದು. ಅದನ್ನು ಮೀರಿದ್ದು, ಬೇರೊಂದಿಲ್ಲ’
-ಡಾ.ಎಚ್.ಎಸ್.ಅನುಪಮಾ ಲೇಖಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News