ಬೀದಿ ಬದಿ ವ್ಯಾಪಾರಿಗಳಿಗೆ ಎತ್ತಂಗಡಿ ಭಾಗ್ಯ!

Update: 2018-08-26 17:21 GMT

ಬೆಂಗಳೂರು, ಆ.26: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಸಂಗ್ರಹವಾಗಿದ್ದ ಹಸಿ ಕಸ ವಿಲೇವಾರಿ ಸಂಬಂಧ ಮೇಯರ್ ಸಂಪತ್‌ರಾಜ್ ಪರಿಶೀಲನೆ ಸಂದರ್ಭದಲ್ಲಿ ಫುಟ್‌ಪಾತ್ ವ್ಯಾಪಾರಿಗಳಿಗಿಂದು ಎತ್ತಂಗಡಿ ಭಾಗ್ಯ ಲಭಿಸಿತು. ನಗರದ ಕೆ.ಆರ್. ಮಾರುಕಟ್ಟೆಗೆ ಮೇಯರ್ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆ ಬದಿ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯರನ್ನು ಬಿಬಿಎಂಪಿ ಸಿಬ್ಬಂದಿ ಬಲವಂತವಾಗಿ ಎತ್ತಂಗಡಿ ಮಾಡಿದರು.

ವ್ಯಾಪಾರ ಮಾಡಲೇಬೇಕೆಂದು ಹಠ ಹಿಡಿದ ಮಹಿಳೆ ಮೇಲೆ ಹಲ್ಲೆ ಮಾಡಿ ಹೊರಹಾಕಿದ್ದು ಅಲ್ಲಿನ ಫುಟ್‌ಪಾತ್ ವ್ಯಾಪಾರಿಗಳನ್ನು ಕೆರಳಿಸಿತು. ಮೇಯರ್ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಈ ವರ್ತನೆಯಿಂದ ವ್ಯಾಪಾರಿಗಳು ಶಾಕ್‌ಗೊಳಗಾಗಿದ್ದರು. ಪ್ರತಿದಿನ ಇಲ್ಲಿ ಹೊಟ್ಟೆಪಾಡಿಗಾಗಿ ಬಂದು ವ್ಯಾಪಾರ ಮಾಡುವವರನ್ನು ಇಂದು ಮೇಯರ್ ಭೇಟಿ ಇದ್ದುದರಿಂದ ಅವರನ್ನೆಲ್ಲ ಎತ್ತಂಗಡಿ ಮಾಡಿದ್ದು, ಅವರಿಗೆ ಕಿರಿಕಿರಿಯಾಗಿದೆ. ಅದರಲ್ಲೂ ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಂತೂ ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲವು ಸಿಬ್ಬಂದಿಗಳು ವೃದ್ಧೆಯನ್ನು ನೂಕಿ ಬೀಳಿಸಿದ್ದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸಿಬ್ಬಂದಿ ಜಾಗ ಖಾಲಿ ಮಾಡಿದ್ದರು.

ಶಿವಾಜಿನಗರ, ಕೆಆರ್ ಪುರ ಸಂತೆ, ಕೆಂಗೇರಿ ಸಂತೆ, ಯಲಹಂಕ, ಮಡಿವಾಳ ಸಂತೆ, ಸಾರಕ್ಕಿ, ಸಿಂಗಸಂದ್ರ ಸಂತೆಗಳಲ್ಲಿ ಹಬ್ಬದ ಪ್ರಯುಕ್ತ ಸಂಗ್ರಹವಾಗಿದ್ದ ಕಸವನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕೆಆರ್ ಮಾರುಕಟ್ಟೆಗೆ ಮೇಯರ್ ಅವರು ಭೇಟಿ ನೀಡಿ ಇಂದು ಮಧ್ಯಾಹ್ನದೊಳಗೆ ಸ್ವಚ್ಛತಾ ಕಾರ್ಯ ನಡೆಸಬೇಕೆಂದು ಆದೇಶಿಸಿದ ಸಂದರ್ಭದಲ್ಲಿ ಈ ಹಲ್ಲೆ ಘಟನೆ ನಡೆಯಿತು. ಕಾಟಾಚಾರಕ್ಕೆ ಮೇಯರ್ ಭೇಟಿ ನೀಡಿದ್ದಾರೆ. ಇಲ್ಲಿ ನಿತ್ಯ ಸಾಕಷ್ಟು ಕಸ ಸಂಗ್ರಹವಾಗುತ್ತದೆ. ಕಸದಲ್ಲೇ ನಾವು ಇರಬೇಕಾಗಿದೆ ಎಂದು ಹಲವರು ಗೊಣಗಿಕೊಳ್ಳುತ್ತಿದ್ದುದು ಕೂಡ ಕೇಳಿಬಂದಿತು.

ಕೆಆರ್ ಪುರ ಮಾರುಕಟ್ಟೆಗೆ ಭೇಟಿ ನೀಡಿದ ನಂತರ ಮೇಯರ್ ಸಂಪತ್‌ರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ಹಬ್ಬದ ಮರುದಿನದಿಂದಲೇ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ಒಟ್ಟು 110 ಟನ್ ಕಸ ಸಾಗಿಸಲಾಗಿದೆ. ಇದರಲ್ಲಿ 40 ಟನ್ ಹಸಿಕಸವನ್ನು ಎಂಎಸ್‌ಜಿಪಿ ಘಟಕಕ್ಕೆ 70 ಟನ್ ಮಿಕ್ಸೆಡ್ ಕಸವನ್ನು ಬೆಳ್ಳಳ್ಳಿ ಘಟಕಕ್ಕೆ ಸಾಗಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News