ವಾಜಪೇಯಿ ದೇಶದ ಉನ್ನತಿಕರಣಕ್ಕೆ ಶ್ರಮಿಸಿದರು: ಸಚಿವ ಅನಂತಕುಮಾರ್

Update: 2018-08-26 17:34 GMT

ಬೆಂಗಳೂರು, ಆ.26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾದಾಗ ಪಕ್ಷಬೇಧ ಮರೆತು ಗಣ್ಯರೆಲ್ಲರೂ ಸಂತಾಪ ಸೂಚಿಸಿದಂತೆ ರವಿವಾರ ನಗರದ ಪುರಭವನದಲ್ಲಿ ಪಕ್ಷಾತೀತವಾಗಿಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ವಾಜಪೇಯಿ ಅವರೊಂದಿಗೆ ರಾಜ್ಯ ಸುತ್ತಿದ್ದು, ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಅವರನ್ನು ಎಬ್ಬಿಸಿ ಕಾಯುತ್ತಿದ್ದ ಸಾವಿರಾರು ಕಾರ್ಯಕರ್ತರತ್ತ ಕೈಬೀಸುವಂತೆ ಮಾಡುತ್ತಿದ್ದ ವಿಚಾರಗಳನ್ನು ನೆನಪಿಸಿಕೊಂಡರು. ರವಿವಾರದ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ಮಾಡಿದ ಭಾಷಣವನ್ನು ಕೃತಿ ರೂಪಕ್ಕೆ ಇಳಿಸಿ ಪುಸ್ತಕವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಭಾರತದ ರೂಪಾಯಿ ಯಾವತ್ತು ವಿಶ್ವದ ಡಾಲರ್ ಆಗುತ್ತದೋ ಅಂದು ಭಾರತ ಆರ್ಥಿಕ ಉನ್ನತಿ ಸಾಧಿಸಿದಂತೆ ಎಂದು ಹೇಳಿದ್ದ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಆ ನಿಟ್ಟಿನಲ್ಲಿ ಕೆಲಸ ಮಾಡಿದರು. ರಾಜಕಾರಣದಲ್ಲಿದ್ದುಕೊಂಡೇ ರಾಜಕೀಯೇತರ ಭಾರತದ ಚಿಂತನೆ ಮಾಡಿದರು ಎಂದು ಹೇಳಿದರಲ್ಲದೆ, ತಮ್ಮ ಊರು ಬಿಟ್ಟು ಮೊದಲ ಬಾರಿ ಹೊಸದಿಲ್ಲಿಗೆ ಬಂದಿದ್ದ ವಾಜಪೇಯಿ ಅವರು ಮೂರು ದಿನ ರಾಮಲೀಲಾ ಮೈದಾನದಲ್ಲಿ ಆಕಾಶವನ್ನೇ ಹೊದಿಕೆ ಮಾಡಿಕೊಂಡು ನಿದ್ರಿಸಿದ್ದರು. ಇದೀಗ ಅದೇ ಹೊಸದಿಲ್ಲಿಯಲ್ಲಿ ಆಕಾಶವನ್ನೇ ಹೊದಿಕೆ ಮಾಡಿಕೊಂಡು ಚಿರನಿದ್ರೆಗೆ ಹೋಗಿದ್ದಾರೆ ಎಂದು ನುಡಿದರು.

ಪೇಜಾವರ ಮಠದ ವಿಶ್ವೇಶ ತೀರ್ಥರು ಮಾತನಾಡಿ, ಯಾರು ಅಸಾಧಾರಣ ಶಕ್ತಿ ಹೊಂದಿರುತ್ತಾರೋ ಅಂಥವರಲ್ಲಿ ಭಗವಂತನ ಸಾನ್ನಿಧ್ಯರುತ್ತದೆ ಎಂಬುದನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಸಾಬೀತುಪಡಿಸಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕತೆ ಜತೆಗಿರಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳಿದರೆ, ಅವೆರಡರ ಸಮನ್ವಯದಿಂದ ವಾಜಪೇಯಿ ಅವರು ಆ ಮಾತು ಸುಳ್ಳು ಮಾಡಿದರು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಸಂಧಾನದಲ್ಲಿ ಭ್ರಾತೃತ್ವ ಎಂಬ ಪದವನ್ನು ಅಂಬೇಡ್ಕರ್ ಏಕೆ ಸೇರಿಸಿದರು ಎಂಬುದನ್ನು ವಾಜಪೇಯಿ ಅವರನ್ನು ನೋಡಿದಾಗ ಗೊತ್ತಾಗುತ್ತದೆ. ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದರೊಂದಿಗೆ ಸಮಾಜವೂ ಚೆನ್ನಾಗಿರಬೇಕು ಎಂದು ಬಯಸಿದವರು ಎಂದು ಹೇಳಿದರು.

ಪೇಜಾವರ ಶ್ರೀಗಳು, ಮಾದಾರ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜೆಡಿಎಸ್ ಹಿರಿಯ ಉಪಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಸೇರಿದಂತೆ ಗಣ್ಯಾತಿಗಣ್ಯರು ವಾಜಪೇಯಿ ಅವರಿಗೆ ನಮನ ಸಲ್ಲಿಸಿದರು.

ಜೆಡಿಎಸ್ ಹಿರಿಯ ಉಪಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ತಾವು ಪ್ರಿಸನರ್ ಆಫ್ ಡೆಮಾಕ್ರಸಿ ಎಂಬ ಪುಸ್ತಕ ಬರೆಯುತ್ತಿದ್ದೇನೆ. ಅದನ್ನು ವಾಜಪೇಯಿ ಅವರಿಗೆ ಅರ್ಪಣೆ ಮಾಡುವುದಾಗಿ ಹೇಳಿದರು. ಮೇಯರ್ ಸಂಪತ್‌ರಾಜ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ಧ ಪಕ್ಷಗಳ ಮುಖಂಡರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News