ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ

Update: 2018-08-27 13:03 GMT

ಅಹ್ಮದಾಬಾದ್, ಆ. 27: ಫೆಬ್ರವರಿ 2002ರಲ್ಲಿ ಗುಜರಾತ್ ರಾಜ್ಯದ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲುಗಾಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹ್ಮದಾಬಾದ್ ನ ವಿಶೇಷ ನ್ಯಾಯಾಲಯ ಇಂದು ಇಬ್ಬರಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.

ಗುಜರಾತ್ ನಲ್ಲಿ ಕೋಮು ಸಂಘರ್ಷಕ್ಕೆ ಈ ಘಟನೆ ಎಡೆ ಮಾಡಿಕೊಟ್ಟಿತ್ತು. ಒಟ್ಟು 59 ಮಂದಿಯ ಸಾವಿಗೆ ಕಾರಣವಾದ ರೈಲಿನ ಎಸ್6 ಬೋಗಿಗೆ ಬೆಂಕಿ ಹಚ್ಚುವ ಸಂಚನ್ನು ಹೂಡಿದವರಾಗಿದ್ದರೆಂದು ಪ್ರಾಸಿಕ್ಯೂಶನ್ ಸಾಬೀತು ಪಡಿಸಿದ ನಂತರ ಫಾರೂಖ್ ಭಾನ ಮತ್ತು ಇಮ್ರಾನ್ ಆಲಿಯಾಸ್‌ ಶೇರು ಬಾತಿಕ್ ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅದೇ ಸಮಯ ಹುಸೈನ್ ಸುಲೇಮಾನ್ ಮೋಹನ್, ಕಸಮ್ ಭಮೆಡಿ ಹಾಗೂ ಫಾರೂಕ್ ಧಂತಿಯ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಐದೂ ಮಂದಿಯನ್ನು 2015-2016ರ ನಡುವೆ ಬಂಧಿಸಲಾಗಿತ್ತು. ಮೋಹನ್ ನನ್ನು ಮಧ್ಯ ಪ್ರದೇಶದ ಜಬುವಾದಿಂದ, ಭಾಮೇಡಿಯನ್ನು ಗುಜರಾತ್ ನ ದಾಹೋಡ್ ರೈಲ್ವೆ ನಿಲ್ದಾಣದಿಂದ ಬಂಧಿಸಲಾಗಿದ್ದರೆ, ಜೀವಾವಧಿ ಶಿಕ್ಷೆಗೊಳಗಾಗಿರುವ ಬಾತಿಕ್ ಎಂಬಾತನನ್ನು ಮಹಾರಾಷ್ಟ್ರದ ಮಾಲೆಗಾಂವ್ ನಿಂದ ಬಂಧಿಸಲಾಗಿತ್ತು.

ಪ್ರಕರಣದಲ್ಲಿ ಬೇಕಾಗಿದ್ದ ಎಂಟು ಮಂದಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ನ್ಯಾಯಾಲಯವು ಈ ಹಿಂದೆ ಈ ಪ್ರಕರಣದಲ್ಲಿ ಒಟ್ಟು 31 ಮಂದಿಯನ್ನು ಕೊಲೆ ಹಾಗೂ ಸಂಚು ನಡೆಸಿದ್ದಕ್ಕಾಗಿ ಅಪರಾಧಿಗಳು ಎಂದು ಘೋಷಿಸಿದ್ದರೆ, ಸಾಕ್ಷ್ಯಗಳ ಕೊರತೆಯ ನೆಪದಲ್ಲಿ 63 ಮಂದಿ ಇತರರನ್ನು ಖುಲಾಸೆಗೊಳಿಸಿತ್ತು. ಖುಲಾಸೆಗೊಂಡವರಲ್ಲಿ ಪ್ರಮುಖ ಆರೋಪಿ  ಉಮರ್ಜಿ ಕೂಡ ಸೇರಿದ್ದ. ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ 31 ಮಂದಿಯ ಪೈಕಿ 11 ಮಂದಿಗೆ ಮರಣದಂಡನೆ ವಿಧಿಸಲಾಗಿದ್ದರೆ 20 ಮಂದಿಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅಕ್ಟೋಬರ್ 2017ರಲ್ಲಿ ಗುಜರಾತ್ ಹೈಕೋರ್ಟ್ 11 ಮಂದಿಯ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇಪ್ಪತ್ತು ಮಂದಿ ಇತರರಿಗೆ ವಿಶೇಷ ಎಸ್‌ಐಟಿ ವಿಧಿಸಿದ್ದ ಶಿಕ್ಷೆಯನ್ನೂ ನ್ಯಾಯಾಲಯ ಎತ್ತಿ ಹಿಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News