ಲಂಡನ್‌ಗೆ ತೆರಳಲು ಅನುಮತಿ ಕೋರಿ ಮುಹಮ್ಮದ್ ನಲಪಾಡ್ ಸಲ್ಲಿಸಿದ್ದ ಅರ್ಜಿ ವಜಾ

Update: 2018-08-27 14:56 GMT

ಬೆಂಗಳೂರು, ಆ.27: ವಿದ್ವತ್ ಅವರ ಕೊಲೆಯತ್ನ ಪ್ರಕರಣದ ಆರೋಪಿಯಾದ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಲಂಡನ್‌ಗೆ ತೆರಳಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ಸೆಷನ್ಸ್ ಕೋರ್ಟ್‌ನಲ್ಲಿಯೇ ಅರ್ಜಿ ಸಲ್ಲಿಸಲು ಸೂಚಿಸಿದೆ.

ಪ್ರಕರಣ ಸಂಬಂಧ ನಲಪಾಡ್‌ಗೆ 2018ರ ಜೂನ್ 14ರಂದು ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್, ನಗರ ಬಿಟ್ಟು ಹೊರ ಹೋಗದಂತೆ ಷರತ್ತು ವಿಧಿಸಿತ್ತು. ಈ ಷರತ್ತು ಸಡಿಲಿಸುವಂತೆ ಕೋರಿ ನಲಪಾಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ನ್ಯಾಯಪೀಠ ನಲಪಾಡ್‌ಗೆ ಸೆಷನ್ಸ್ ಕೋರ್ಟ್‌ನಲ್ಲಿಯೇ ಲಂಡನ್‌ಗೆ ತೆರಳುವ ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿ ಎಂದು ಸೂಚಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ನನ್ನ ಸಹೋದರ ಲಂಡನ್‌ನಲ್ಲಿ ನೆಲೆಸಿದ್ದಾನೆ. ಆತನನ್ನು ಭೇಟಿ ಮಾಡುವುದಕ್ಕಾಗಿ ಇದೇ 25ರಿಂದ 15 ದಿನಗಳ ಲಂಡನ್‌ಗೆ ತೆರಳಲು ಉದ್ದೇಶಿಸಿದ್ದೇನೆ. ಹೀಗಾಗಿ, ಜಾಮೀನು ಷರತ್ತು ಸಡಿಲಿಸಿ ಲಂಡನ್‌ಗೆ ತೆರಳಲು ಅವಕಾಶ ಕಲ್ಪಿಸಬೇಕು ಎಂದು ನಲಪಾಡ್ ತನ್ನ ಅರ್ಜಿಯಲ್ಲಿ ಕೋರಿದ್ದನು.

2018ರ ಫೆ.17ರಂದು ರಾತ್ರಿ ಮುಹಮದ್ ನಲಪಾಡ್ ಹಾರಿಸ್ ಮತ್ತು ಅವರ ಸಹಚರರು ನಗರದ ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ವಿದ್ವತ್ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಮುಹಮದ್ ನಲಪಾಡ್ ಅವರನ್ನು ಮೊದಲನೆ ಆರೋಪಿಯನ್ನಾಗಿಸಿ ಅಧೀನ ನ್ಯಾಯಾಲಯಕ್ಕೆ 2018ರ ಮೇ 1ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೈಕೋರ್ಟ್ ಆತನಿಗೆ ಜೂನ್ 14ರಂದು ಜಾಮೀನು ನೀಡಿತ್ತು. ಇದರಿಂದ 116 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದ ಮುಹಮದ್ ನಲಪಾಡ್, ಜಾಮೀನು ಮೇಲೆ ಬಿಡುಗಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News