ಕಡತ ವಿಲೇವಾರಿ ಚುರುಕುಗೊಳಿಸದಿದ್ದರೆ ಗ್ರಾಮ ಲೆಕ್ಕಿಗ, ಆರ್‌ಐ ವಿರುದ್ಧ ಕ್ರಮ: ಬೆಂಗಳೂರು ಗ್ರಾಮಾಂತರ ಡಿಸಿ

Update: 2018-08-27 14:57 GMT

ಬೆಂಗಳೂರು, ಆ.27: ಕಂದಾಯ ಇಲಾಖೆಯಲ್ಲಿ ಬಾಕಿ ಉಳಿಯದಂತೆ ತ್ವರಿತವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ, ಇಲಾಖೆಯ ಗ್ರಾಮ ಲೆಕ್ಕಿಗ, ಆರ್‌ಐ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಎಚ್ಚರಿಸಿದ್ದಾರೆ.

ಸೋಮವಾರ ನಗರದ ಡಾ.ಅಂಬೇಡ್ಕರ್ ರಸ್ತೆಯ ವಿಶ್ವೇಶ್ವರಯ್ಯ ಗೋಪುರದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಕಂದಾಯ ಇಲಾಖೆಯ ಎಲ್ಲ ನೌಕರರೊಂದಿಗೆ ಏಕ ಕಾಲಕ್ಕೆ ಸಂಪರ್ಕ ಸಾಧಿಸಬಹುದಾದ ’ಗ್ರೂಪ್ ಟಾಕ್’ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿಗೆ ದೇವನಹಳ್ಳಿ ಹಾಗೂ ನೆಲಮಂಗಲ ತಾಲೂಕಿಗೆ ಭೇಟಿ ನೀಡಿದಾಗ, 1,368 ಪ್ರಕರಣಗಳಿಗೆ ಮಾತ್ರ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, 3,200 ಪ್ರಕರಣಗಳಿಗೆ ನೋಟಿಸ್ ನೀಡಿಲ್ಲ. ಈ ಬಗ್ಗೆ ಎಚ್ಚರವಹಿಸಿ ತ್ವರಿತವಾಗಿ ಇತ್ಯರ್ಥ ಪಡಿಸಬೇಕು ಎಂದು ಸೂಚಿಸಿದರು.

ಅದೇರೀತಿ, ಹೊಸಕೋಟೆಯ ಸರ್ವೆ ಸೂಪರ್ ಲಾಗಿನ್‌ನಲ್ಲಿ 281 ಪ್ರಕರಣಗಳು ಹಾಗೇ ಉಳಿದಿದೆ. ಬರೀ ಸ್ವೀಕೃತಿಗಾಗಿಯೇ, ತಡೆ ಮಾಡಿರುವುದು ಬೆಳಕಿಗೆ ಬಂದಿದ್ದು, ಶೀಘ್ರವಾಗಿ ಖಾಲಿ ಉಳಿಯದಂತೆ ಕಾರ್ಯನಿರ್ವಹಿಸಿ ಎಂದು ಆ್ಯಪ್ ಮೂಲಕವೇ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಪ್ರತಿ ಸೋಮವಾರ, 15 ನಿಮಿಷಗಳ ಕಾಲ ಗ್ರೂಪ್ ಟಾಕ್ ಮೊಬೈಲ್ ಆ್ಯಪ್ ಮೂಲಕ ಸಭೆ, ಚರ್ಚಿಸಿ ಮಾರ್ಗದರ್ಶನ ಮಾಡಲಾಗುವುದು. ಇಲಾಖೆ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೀಗೌಡ ಹೇಳಿದರು.

ತಾಲೂಕು ಕಚೇರಿಗಳಲ್ಲಿ ಸುಮಾರು ವರ್ಷಗಳಿಂದ ಕೆಲವು ಪ್ರಕರಣಗಳು ಬಾಕಿ ಉಳಿದಿವೆ. ಆದರೆ, ನಿಯಮಾನುಸಾರ 30ದಿನಗಳೊಳಗೆ ಇತ್ಯರ್ಥ ಮಾಡಬೇಕು. ಆದರೂ, ಬಾಕಿ ಉಳಿದಿದ್ದು, ಈ ಸಂಬಂಧ ಸಭೆ ನಡೆಸಿ, ಆನ್‌ಲೈನ್‌ನಲ್ಲಿ ಮಾಹಿತಿ ದೊರೆಯುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News