ನಾರಾಯಣಗುರು ಸ್ಮಾರಕ, ಮ್ಯೂಸಿಯಂ ನಿರ್ಮಾಣಕ್ಕೆ ಸರಕಾರ ಬದ್ಧ: ಕುಮಾರಸ್ವಾಮಿ

Update: 2018-08-27 16:38 GMT

ಬೆಂಗಳೂರು, ಆ.27: ಸಾಮಾಜಿಕ ಕ್ರಾಂತಿಕಾರಿ ಬ್ರಹ್ಮಶ್ರೀ ನಾರಾಯಣಗುರು ಅವರ ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದು, ಅದಕ್ಕೆ ಸರಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಿದೆ ಎಂದು ತಿಳಿಸಿದರು.

ಸಾಮಾಜಿಕ ಕ್ರಾಂತಿಕಾರಿ, ಅಸ್ಪಶ್ಯತೆ ವಿರುದ್ಧ ಸಮರ ಸಾರಿದ ಹಾಗೂ ಜಾತಿ, ಮತ, ಪಂಥಗಳನ್ನು ಮೀರಿ ನಾವೆಲ್ಲರೂ ಮನುಷ್ಯರು ಎಂದು ಸಾರಿದ ನಾರಾಯಣ ಗುರು ಅವರ ಸಂದೇಶವನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ಸರಕಾರದಿಂದ ಅವರ ಕುರಿತ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೆ, ಅವರ ಹೆಸರಿನಲ್ಲಿ ಗ್ರಂಥಾಲಯ ತೆರೆಯುವ ಮೂಲಕ ಅವರ ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

18-19 ನೆ ಶತಮಾನದ ಅವಧಿಯಲ್ಲಿ ಕೇರಳ ಹಾಗೂ ಪೂರ್ವ ಕರಾವಳಿ ಭಾಗದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಅಸ್ಪಶ್ಯತೆ ಎಂಬ ಮನೋರೋಗ ಭೀಕರ ವಾತಾವರಣವನ್ನೆ ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೆ, ಕೆಳವರ್ಗದ ಜನರು ಸಾರ್ವಜನಿಕ ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವಂತಿರಲಿಲ್ಲ. ತಲೆಗೆ ಮುಂಡಾಸು, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಮಹಿಳೆಯರು ಎದೆ ಮುಚ್ಚಿಕೊಳ್ಳುವಂತಿರಲಿಲ್ಲ. ಇವೆಲ್ಲವುದರ ವಿರುದ್ಧ ಜಾಗೃತಿ ನೀಡಿದವರು ಹಾಗೂ ಬಲವಾಗಿ ಖಂಡಿಸಿದ್ದರು ಎಂದು ಅವರು ನುಡಿದರು.

ಸಚಿವೆ ಡಾ.ಜಯಮಾಲ ಮಾತನಾಡಿ, ಕೆಳ ವರ್ಗವೊಂದರಿಂದಲೇ ಜನಿಸಿ ಬಂದ ನಾರಾಯಣ ಗುರುಗಳು ನಡೆಸಿದ ಕ್ರಾಂತಿ ದೊಡ್ಡದೊಂದು ಬದಲಾವಣೆಯನ್ನೆ ಹುಟ್ಟುಹಾಕಿತು. ಅಷ್ಟು ಮಾತ್ರವಲ್ಲ, ನಾರಾಯಣ ಗುರುಗಳ ಸುಧಾರಣಾ ನೀತಿಗಳು ದೇಶದ ಇತರ ಭಾಗಗಳಲ್ಲಿನ ಸಾಮಾಜಿಕ ಹೋರಾಟಕ್ಕೂ ಮಾದರಿಯಾದವು. ಡಾ.ಬಿ.ಆರ್.ಅಂಬೇಡ್ಕರ್ ಅಪಾರವಾದ ಪ್ರಭಾವ ಬೀರಿದ್ದರು ಎಂದು ಹೇಳಿದರು.

ಸಾಮಾಜಿಕ ಅಸಮಾನತೆಗೆ ಶಿಕ್ಷಣವೇ ಸೂಕ್ತ ಮದ್ದು ಎಂಬುದನ್ನ ಅರಿತಿದ್ದ ನಾರಾಯಣ ಗುರುಗಳು ಹಿಂದುಳಿದ ಸಮುದಾಯದ ಮಕ್ಕಳಿಗೆಂದೇ ಶಾಲೆಗಳನ್ನು ತೆರೆಯಲು ಮುಂದಾಗಿದ್ದರು. ಇದನ್ನು ಮೇಲ್ವರ್ಗದವರು ವಿರೋಧಿಸಿದರು ಲೆಕ್ಕಿಸಲಿಲ್ಲ. ತಮ್ಮ ತಳ ಸಮುದಾಯವನ್ನು ರಕ್ಷಿಸುವ ಕೆಲಸ ಮಾಡಿದರು. ಅಲ್ಲದೆ, ಮನುಷ್ಯ ಮನುಷ್ಯರನ್ನು ಪ್ರೀತಿಸುವ, ಅರ್ಥ ಮಾಡಿಕೊಳ್ಳುವ ವಿಚಾರಗಳನ್ನು ಬೋಧಿಸಿದ್ದಾರೆ ಎಂದು ಅವರು ತಿಳಿಸಿದರು.

ಇಂದಿನ ಸಮುದಾಯ ನಾರಾಯಣ ಗುರುಗಳ ಆದರ್ಶಗಳನ್ನು ಯಾರೂ ಪಾಲಿಸುತ್ತಿಲ್ಲ. ದೊಡ್ಡ ದೊಡ್ಡ ಮಂದಿರಗಳನ್ನು ನಿರ್ಮಿಸಬೇಡಿ ಎಂದಿದ್ದರು. ಆದರೆ, ಇಂದು ಎಲ್ಲರಿಗೂ ಬೃಹತ್ ದೇವಾಲಯಗಳೇ ಬೇಕಾಗಿದೆ. ಮತ್ತೊಂದು ಕಡೆ ಅವರು ಅಂತರ್ ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಮೂಲಕ ಜಾತೀಯತೆ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಿದರು. ಇಂದು ಅಂತರ್ ಜಾತೀಯ ವಿವಾಹವಾದರೆ ಮರ್ಯಾದೆ ಹತ್ಯೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಎಲ್ಲರೂ ನಾರಾಯಣ ಗುರುಗಳ ಆದರ್ಶ ಪಾಲಿಸಬೇಕು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇರಳದ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ, ಶಾಸಕರಾದ ಎಚ್.ಹರತಾಳು ಹಾಲಪ್ಪ, ಎಸ್.ಕುಮಾರ ಬಂಗಾರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಆರ್ಯ ಈಡಿಗ ಸಂಘದ ಡಾ.ಎಂ.ತಿಮ್ಮೇಗೌಡ, ಬಿಲ್ಲವ ಅಸೋಸಿಯೇಷನ್‌ನ ವೇದಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೀಡಾಗಿರುವ ಕೊಡಗು ಜನರಿಗೆ ನೆರವಾಗುವ ಉದ್ದೇಶದಿಂದ ಶ್ರೀ ಸುಧಾ ಕೋ ಆಪರೇಟೀವ್ ಬ್ಯಾಂಕ್ ವತಿಯಿಂದ 20 ಲಕ್ಷದ 1 ಸಾವಿರ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News