20ನೆ ಶತಮಾನದ ಶ್ರೇಷ್ಠ ನಾಯಕ ದೇವರಾಜ ಅರಸು: ಸಿ.ಕೆ.ರಾಮೇಗೌಡ

Update: 2018-08-27 15:55 GMT

ಬೆಂಗಳೂರು, ಆ. 27: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯ ಕಂಡ 20ನೆ ಶತಮಾನದ ಶ್ರೇಷ್ಠ ವ್ಯಕ್ತಿ ಎಂದು ನಿಕಟಪೂರ್ವ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಇಂದಿಲ್ಲಿ ಬಣ್ಣಿಸಿದರು.

ಸೋಮವಾರ ನಗರದ ಚಾಮರಾಜಪೇಟೆಯ ಕಸಾಪದಲ್ಲಿ ಅರಸು ವಿಚಾರ ವೇದಿಕೆ ಆಯೋಜಿಸಿದ್ದ, ‘ಅರಸುಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಆಶಾಕಿರಣ ಆಗಿದ್ದ ಅರಸು, ನೆಹರೂರನ್ನು ಮೀರಿಸುವಂತ ನಾಯಕತ್ವದ ಗುಣಗಳನ್ನು ಹೊಂದಿದ್ದರು ಎಂದು ತಿಳಿಸಿದರು.

ಅರಸು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕ. ಭೂ ಸುಧಾರಣೆ, ಉಳುವವನೇ ಹೊಲದೊಡೆಯ ಎನ್ನುವ ಕಾನೂನುಗಳನ್ನು ಜಾರಿಗೆ ತಂದ ಸಮಾಜ ಸುಧಾರಕ. ಒಡೆದು ಹೋಗಿದ್ದ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

8 ವರ್ಷಗಳ ಕಾಲ ಮುಖ್ಯಮಂತ್ರಿ ಪದವಿಯಲ್ಲಿದ್ದ ಅರಸು ಎಲ್ಲಾ ಸಮುದಾಯಗಳನ್ನು ಮೇಲಕ್ಕೆ ತರಲು ಶ್ರಮವಹಿಸಿದರು. ಸರಕಾರಿ ನೌಕರರ ಸೇವಾವಧಿಯನ್ನು 55 ವರ್ಷದಿಂದ 58 ವರ್ಷದವರೆಗೆ ಮುಂದುವರೆಸಿ ಎಲ್ಲ ಸರಕಾರಿ ನೌಕರರಿಗೂ ಒಳಿತನ್ನೆ ಬಯಸಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ನೆರವಾದರು. ಅಷ್ಟೇ ಅಲ್ಲದೆ, ಮೊದಲ ಬಾರಿಗೆ ನಿರುದ್ಯೋಗಿ ಪದವೀಧರರಿಗೆ ಸ್ಟೇ ಪಂಡ್ ನೀಡಿದರು ಎಂದು ಸ್ಮರಿಸಿದರು.

ಅರಸರ ಆಡಳಿತ ಹೊಗಳಿಕೆಗಿಂತ ಟೀಕೆಗೆ ಗುರಿಯಾಗಿದ್ದೇ ಹೆಚ್ಚು. ಆದರೂ, ಒಂದು ಹೆಜ್ಜೆ ಕೂಡಾ ಹಿಂದೆ ಸರಿಯದೆ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಿದರು. 1952ರಲ್ಲಿ ವಿಧಾನಸಭೆ ಅಧಿವೇಶನ ಮುಗಿಸಿಕೊಂಡು ವ್ಯವಸಾಯ ಮಾಡಲು ಊರಿಗೆ ಪ್ರಯಾಣ ಬೆಳೆಸುತ್ತಿದ್ದ ಅವರ ಬದುಕೇ, ಮುಂದಿನ ಪೀಳಿಗೆಗೆ ಒಂದು ದಾರಿ ದೀಪವಾಗಿದೆ. ಅರಸರ ನುಡಿಗಳು, ಬದುಕು, ಸಾಧನೆ ನಮ್ಮೆಲ್ಲರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ದೇವರಾಜ ಅರಸರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟವರು. ಹಿಂದುಳಿದ ಇಲಾಖೆ ಇರುವುದು ಅವರಿಂದಲೇ. ಹಿಂದುಳಿದ ವರ್ಗದ ಲಕ್ಷಾಂತರ ಜನರ ಬಾಳಿಗೆ ಬೆಳಕಾದವರು. ಅವರ ಕಾರ್ಯ ಚಟುವಟಿಕೆಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಂಡು ಸದೃಢ ಸಮಾಜ ಕಟ್ಟಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಂ.ತಿಮ್ಮಯ್ಯ, ಎಂ.ಎಸ್.ಶಶಿಕಲಾಗೌಡ, ಕೆ.ಹನುಮಂತಯ್ಯ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News