ಎಚ್‌ಡಿಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಚಾರ: ಪಿಐಎಲ್ ಹಿಂಪಡೆದ ಅರ್ಜಿದಾರ

Update: 2018-08-27 15:56 GMT

ಬೆಂಗಳೂರು, ಆ.27: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಆಗಮಿಸಿದ್ದ ಗಣ್ಯ ವ್ಯಕ್ತಿಗಳ ವೆಚ್ಚವನ್ನು ಅವರ ಸ್ವಂತ ಹಣದಿಂದಲೇ ಭರಿಸಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಅರ್ಜಿದಾರರು ಹಿಂಪಡೆದಿದ್ದಾರೆ.

ಬೆಂಗಳೂರಿನ ಎ. ಆಲಂ ಪಾಷಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠದ ಮುಂದ ಸೋಮವಾರ ವಿಚಾರಣೆಗೆ ಬಂದಿತು. ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯಲ್ಲಿರುವ ಆರೋಪಗಳಿಗೆ ನಿಮ್ಮ ಬಳಿ ದಾಖಲೆಗಳೇನಿವೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವೆಚ್ಚ ಮಾಡಿರುವ ಹಣದ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನೇಕೆ ನ್ಯಾಯಾಲಯಕ್ಕೆ ಒದಗಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

ಆರೋಪಗಳಿಗೆ ಪೂರಕ ದಾಖಲೆಗಳನ್ನು ಒದಗಿಸದೆ ಕೇವಲ ಪತ್ರಿಕಾ ವರದಿಗಳ ಆಧಾರದ ಮೇಲೆ ಪಿಐಎಲ್ ಸಲ್ಲಿಸಲು ಸಾಧ್ಯವಿಲ್ಲ. ಮೇಲಾಗಿ ಪ್ರಕರಣದ ಸಂಬಂಧ ರಾಜ್ಯ ಸರಕಾರಕ್ಕೆ ಯಾವುದೇ ಮನವಿ ಸಲ್ಲಿಸದೆ ನೇರವಾಗಿ ಪಿಐಎಲ್ ಸಲ್ಲಿಸಲಾಗಿದೆ. ಹೀಗಾಗಿ ಅರ್ಜಿ ವಜಾಗೊಳಿಸುವುದಾಗಿ ತಿಳಿಸಿತು. ಇದಕ್ಕೆ ಅರ್ಜಿದಾರರ ಪರ ವಕೀಲರು, ಪಿಐಎಲ್ ಹಿಂಪಡೆದು, ಸರಕಾರಕ್ಕೆ ಈ ಕುರಿತು ಮನವಿ ಸಲ್ಲಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News