ಸುಳ್ಳು ದಾಖಲೆ ಸೃಷ್ಟಿಸಿದ ಮಹಿಳೆಗೆ 50 ಸಾವಿರ ದಂಡ ವಿಧಿಸಿದ ಹೈಕೋರ್ಟ್

Update: 2018-08-27 16:00 GMT

ಬೆಂಗಳೂರು, ಆ.27: ಚಳ್ಳಕೆರೆ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪಕ್ಕೆ ಗುರಿಯಾಗಿರುವ ನಗರಂಗೆರೆ ನಿವಾಸಿ ಬಿ.ಆರ್.ಪುಷ್ಪಾ ಅವರಿಗೆ ಹೈಕೋರ್ಟ್ 50 ಸಾವಿರ ದಂಡ ವಿಧಿಸಿದೆ.

ದುರಾಸೆ ಮತ್ತು ಮೋಸಗಾರಿಕೆಯಿಂದ ಜುಜುಬಿ ಪ್ರಕರಣ ದಾಖಲಿಸಿದ ಅರ್ಜಿದಾರರ ವಿರುದ್ಧ ಸಿಐಡಿ ತನಿಖೆ ನಡೆಸಿ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಚಿತ್ರದುರ್ಗ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.

ಚಳ್ಳಕೆರೆ ನಗರಸಭೆಗೆ ಸೆಪ್ಟೆಂಬರ್ 1ರಂದು ಚುನಾವಣೆ ನಡೆಯಲಿದೆ. ವಾರ್ಡ್ ನಂ 21 ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಕ್ಷೇತ್ರ. ನಾನು ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೆ. ಆದರೆ, ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಕ್ಷೇಪಿಸಿ ಬಿ.ಆರ್.ಪುಷ್ಪಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ದೇವಿ ಪ್ರಸಾದ್ ಶೆಟ್ಟಿ, ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮ ಕಾನೂನು ಬಾಹಿರ ಮತ್ತು ಏಕಪಕ್ಷೀಯವಾಗಿದೆ. ರಾಜಕೀಯ ಪ್ರೇರಿತವಾಗಿ ಈ ರೀತಿ ಮಾಡಲಾಗಿದೆ. ಹೀಗಾಗಿ, ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ನಿರ್ದೇಶಿಸಬೇಕು ಎಂದು ಕೋರಿದ್ದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ, ಅರ್ಜಿದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮ ಸರಿಯಾಗಿಯೇ ಇದೆ. ಅರ್ಜಿದಾರರು ವಾಸ್ತವದಲ್ಲಿ ನಗರಂಗೆರೆ ನಿವಾಸಿಗಳು. ಆದರೆ, ಚಳ್ಳಕೆರೆಯಲ್ಲಿ ಇದ್ದೇವೆ ಎಂದು ಸುಳ್ಳು ಬಾಡಿಗೆ ಕರಾರು ಹಾಗೂ ನಿವಾಸಿ ದೃಢೀಕರಣ ಪತ್ರ ಸೃಷ್ಟಿಸಿದ್ದಾರೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಈ ಅಂಶವನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರಿಗೆ ಛೀಮಾರಿ ಹಾಕಿದೆ. ಇಂತಹವರಿಗೆ ಅಧಿಕಾರ ಕೊಟ್ಟರೆ ಸ್ಥಳೀಯ ಸಂಸ್ಥೆಗಳ ಉದ್ದೇಶವನ್ನೇ ಮುಳುಗಿಸಿಬಿಡುತ್ತಾರೆ. ಜನರ ನಂಬಿಕೆಯ ಕೇಂದ್ರವೆನಿಸಿದ ನ್ಯಾಯಾಂಗದ ದಿಕ್ಕನ್ನೆ ತಪ್ಪಿಸುವ ಇವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಕಿಡಿಕಾರಿದೆ. ನ್ಯಾಯಾಲಯದ ಮೆಟ್ಟಿಲು ಏರುವವರು ಕಾಯಾ, ವಾಚಾ, ಮನಸಾ ಶುದ್ಧತೆ ಹೊಂದಿರಬೇಕು. ನ್ಯಾಯದ ಪರ ನಡೆಸುವ ಹೋರಾಟ ವಸ್ತುನಿಷ್ಠವಾಗಿರಬೇಕು ಎಂದು ಕಿವಿಮಾತು ಹೇಳಿದೆ.

ದಂಡದ ಹಣವನ್ನು ಈ ಆದೇಶ ಹೊರಬಿದ್ದ ತಿಂಗಳ ಒಳಗೆ ಮುಖ್ಯಮಂತ್ರಿಗಳ ಪ್ರಕೋಪ ಪರಿಹಾರ ನಿಧಿಗೆ ಪಾವತಿಸಬೇಕು. ಇಲ್ಲದಿದ್ದರೆ ರಿಜಿಸ್ಟ್ರಾರ್ ಜನರಲ್ ಅರ್ಜಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News