×
Ad

ಶೇ.2 ರಷ್ಟು ಭೂ ಸಾರಿಗೆ ಉಪಕರ ವಿಧಿಸಲು ಬಿಬಿಎಂಪಿ ಚಿಂತನೆ

Update: 2018-08-27 22:56 IST

ಬೆಂಗಳೂರು, ಆ.27: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಶೇ.2 ರಷ್ಟು ನಗರ ಭೂ ಸಾರಿಗೆ ಉಪಕರ ವಿಧಿಸಲು ಮುಂದಾಗಿದೆ. ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಆಸ್ತಿ ತೆರಿಗೆ ಶೇ.20 ರಿಂದ 25ಕ್ಕೆ ಹೆಚ್ಚಳ ಮಾಡಲಾಗಿತ್ತು.

ನಗರದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವುದರಿಂದ ಬಿಎಂಟಿಸಿ ಬಸ್‌ಗಳು ಹಾಳಾಗುತ್ತಿವೆ. ಹೀಗಾಗಿ ನಗರ ಭೂ ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ಪಾಲಿಕೆಯಿಂದ ಹಣ ನೀಡಬೇಕೆಂದು ಸಾರಿಗೆ ಸಚಿವರೇ ಹೇಳಿಕೆ ನೀಡಿದ್ದರು. ಜತೆಗೆ ಈ ಕುರಿತು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿರುವ ರಾಜ್ಯ ಸರಕಾರ, ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಮೊತ್ತದ ಶೇ.2 ಹಣವನ್ನು ನಗರ ಭೂ ಸಾರಿಗೆ ಉಪಕರ ಎಂದು ವಿಧಿಸುವಂತೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇದನ್ನು ಪಾಲಿಕೆಯ ಕೌನ್ಸಿಲ್ ಮುಂದಿಟ್ಟು, ಅನುಮೋದನೆ ದೊರೆತರೆ ಬೆಂಗಳೂರಿನ ಆಸ್ತಿ ಮಾಲೀಕರು ಇನ್ನು ಮುಂದೆ ಹೆಚ್ಚುವರಿ ಶೇ.2ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಪಾಲಿಕೆಯಿಂದ ಈ ಹಿಂದಿನಿಂದಲೂ ನಗರ ಭೂ ಸಾರಿಗೆ ಉಪಕರ ಸಂಗ್ರಹಿಸಲಾಗಿತ್ತಾದರೂ, ಆಸ್ತಿ ಮಾಲಕರಿಗೆ ಹೊರೆಯಾಗುತ್ತದೆ ಎಂಬ ಉದ್ದೇಶದಿಂದ ಉಪಕರ ವಸೂಲಿ ಆದೇಶ ಹಿಂಪಡೆಯುವಂತೆ 2014ರಲ್ಲಿಯೇ ಕೌನ್ಸಿಲ್ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಬಿಬಿಎಂಪಿ ನಿರ್ಣಯವನ್ನು ಪರಿಗಣಿಸಲು ಬರುವುದಿಲ್ಲ ಎಂದು ಸರಕಾರ ತಿಳಿಸಿದ್ದು, ನಗರ ಭೂ ಸಾರಿಗೆ ಉಪಕರ ಸಂಗ್ರಹಿಸುವಂತೆ ಸೂಚಿಸಿದೆ.

ಅಲ್ಲದೆ, ಉಪಕರ ಸಂಗ್ರಹಿಸದಿರುವುದರಿಂದ ರಾಜಸ್ವಕ್ಕೆ ನಷ್ಟವಾಗುತ್ತಿದೆ ಎಂಬ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು. ಹೀಗಾಗಿ ಈ ಹಿಂದೆ ಆದೇಶಿಸಿದಂತೆ 2013ರಿಂದಲೇ ಶೇ.2 ಹೆಚ್ಚುವರಿ ತೆರಿಗೆ ವಸೂಲಿ ಮಾಡಬೇಕಿತ್ತು. ಆ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಆಸ್ತಿ ತೆರಿಗೆ ಪಾವತಿ ವೇಳೆ 2013-14 ರಿಂದ 2018-19ರವರೆಗೆ ವಸೂಲಿಯಾಗದ ಉಪಕರ ಮೊತ್ತವನ್ನು ವಸೂಲಿ ಮಾಡುವ ಕುರಿತು ಬಿಬಿಎಂಪಿ ಚಿಂತನೆ ನಡೆಸಿದೆ. ಬಿಬಿಎಂಪಿ ಸಂಗ್ರಹಿಸುವ ನಗರ ಭೂ ಸಾರಿಗೆ ಉಪಕರವನ್ನು ನಗರ ಭೂ ಸಾರಿಗೆ ಇಲಾಖೆಗೆ ಪಾವತಿಸಲಾಗುತ್ತದೆ. ಆ ಹಣವನ್ನು ನಗರದಲ್ಲಿ ಸಾರಿಗೆ ಹಾಗೂ ಸಂಚಾರ ವ್ಯವಸ್ಥೆ ಉತ್ತಮ ಪಡಿಸಲು ವೆಚ್ಚ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News