ಬಾಕ್ಸರ್ ವಿಕಾಸ್, ಅಮಿತ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2018-08-27 18:46 GMT

ಜಕಾರ್ತ, ಆ.27: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತ ಭಾರತದ ಬಾಕ್ಸರ್‌ಗಳಾದ ವಿಕಾಸ್ ಕ್ರಿಶನ್(75 ಕೆಜಿ)ಹಾಗೂ ಅಮಿತ್ ಫಾಂಘಾಲ್(49 ಕೆಜಿ) ಏಶ್ಯನ್ ಗೇಮ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

 ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 2010 ಹಾಗೂ 2014ರ ಏಶ್ಯನ್ ಗೇಮ್ಸ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿದ್ದ ವಿಕಾಸ್ ಪಾಕಿಸ್ತಾನದ ಬಾಕ್ಸರ್ ತನ್ವೀರ್ ಅಹ್ಮದ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಂದ್ಯದ ವೇಳೆ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಿಕಾಸ್ ಎಡಗಣ್ಣಿಗೆ ಗಾಯವಾಗಿತ್ತು. ಆದಾಗ್ಯೂ ತನ್ನ ಹೋರಾಟವನ್ನು ಮುಂದುವರಿಸಿ ಪಾಕ್ ಆಟಗಾರನನ್ನು ಮಣಿಸಿದರು.

ವಿಕಾಸ್ ಬುಧವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಟುಹೆಟಾ ಟಂಗ್ಲಟಿಹಾನ್‌ರನ್ನು ಎದುರಿಸಲಿದ್ದಾರೆ. ವಿಕಾಸ್ ಒಂದು ವೇಳೆ ಏಶ್ಯನ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಪದಕ ಜಯಿಸಿದರೆ ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಳ್ಳಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಅಮಿತ್ ಕಳಪೆ ಆರಂಭದಿಂದ ಚೇತರಿಸಿಕೊಂಡು ಮಂಗೋಲಿಯದ ಎನ್ಖಮಾಂದಖ್ ಖರುಹು ಅವರನ್ನು 5-0 ಅಂತರದಿಂದ ಸೋಲಿಸಿದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅಮಿತ್ ಮುಂದಿನ ಸುತ್ತಿನಲ್ಲಿ ಉತ್ತರ ಕೊರಿಯಾದ ಕಿಮ್ ಜಾಂಗ್ ರಿಯೊಂಗ್‌ರನ್ನು ಎದುರಿಸಲಿದ್ದಾರೆ.

ಇದೇ ವೇಳೆ ಧೀರಜ್ ರಂಗಿ(64ಕೆಜಿ)ಮಂಗೋಲಿಯದ ನುರ್ಲನ್ ಕುಬಶೆವ್‌ರನ್ನು ಸೋಲಿಸಿ ಪದಕ ದೃಢಪಡಿಸಿದ್ದಾರೆ.

ಮತ್ತೊಂದು ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮುಹಮ್ಮದ್ ಹುಸ್ಸಾಮುದ್ದೀನ್ ಕಿರ್ಗಿಸ್ತಾನದ ಅಮರ್‌ಖರ್ಕು ವಿರುದ್ಧ ಸೋತು ನಿರಾಸೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News