ಏಶ್ಯನ್ ಗೇಮ್ಸ್: ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧುಗೆ ಬೆಳ್ಳಿ

Update: 2018-08-28 07:51 GMT

ಜಕಾರ್ತ, ಆ.28: ಏಶ್ಯನ್ ಗೇಮ್ಸ್‌ನಲ್ಲಿ ಫೈನಲ್‌ಗೆ ತಲುಪಿ ಐತಿಹಾಸಿಕ ಸಾಧನೆ ಮಾಡಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮಂಗಳವಾರ ನಡೆದ ಫೈನಲ್‌ನಲ್ಲಿ ಸೋಲನುಭವಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

ಚಿನ್ನದ ಪದಕಕ್ಕಾಗಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಸಿಂಧು ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ ವಿರುದ್ಧ 13-21, 16-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಸಿಂಧು ಸೋಮವಾರ ಜಪಾನ್‌ನ ಅಕಾನೆ ಯಮಗುಚಿಯವರನ್ನು ಸೋಲಿಸಿ ಏಶ್ಯನ್ ಗೇಮ್ಸ್‌ನ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

1982ರ ಏಶ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೈಯದ್ ಮೋದಿ ಕೊನೆಯ ಬಾರಿ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದರು. ಇದು ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ್ದ ಏಕೈಕ ಪದಕವಾಗಿತ್ತು.

ಸೋಮವಾರ ಚೈನೀಸ್ ತೈಪೆಯ ಯಿಂಗ್‌ಗೆ ಶರಣಾಗಿದ್ದ ಭಾರತದ ಇನ್ನೋರ್ವ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಭಾರತದ 36 ವರ್ಷಗಳ ಸಿಂಗಲ್ಸ್ ಪದಕದ ಬರವನ್ನು ನೀಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News