ಗೂಗಲ್ ಪೇ ಬಳಸಿ ಒಂದು ಲ.ರೂ.ವರೆಗೆ ಬಹುಮಾನ ಗೆಲ್ಲುವುದು ಹೇಗೆ?

Update: 2018-08-29 11:26 GMT

 ಗೂಗಲ್ ತನ್ನ ಹಣಪಾವತಿ ಆ್ಯಪ್ ತೇಝ್‌ನ ಮೊದಲ ವರ್ಷಾಚರಣೆಯ ಸಂಭ್ರಮದಲ್ಲಿದೆ. ಮಂಗಳವಾರವಷ್ಟೇ ಈ ಆ್ಯಪ್‌ನ್ನು ಗೂಗಲ್ ಪೇ ಎಂದು ಮರುನಾಮಕರಣಗೊಳಿಸಿರುವ ಕಂಪನಿಯು ಡಿಜಿಟಲ್ ಹಣಪಾವತಿಗಾಗಿ ಈ ಆ್ಯಪ್ ಬಳಕೆದಾರರಿಗೆ ಒಂದು ಲ.ರೂ.ವರೆಗೆ ಬಹುಮಾನಗಳನ್ನು ಗೆಲ್ಲುವ ಆಕರ್ಷಕ ಯೋಜನೆಯನ್ನು ಪ್ರಕಟಿಸಿದೆ. ಈ ಆ್ಯಪ್ ಈಗಲೂ ತೇಝ್ ಹೆಸರಿನಲ್ಲಿಯೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಯೋಜನೆಯ ವಿವರಗಳನ್ನೊಳಗೊಂಡಿದೆ.

ಐದು ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಕೊಡುಗೆಗಳನ್ನು ಪ್ರಕಟಿಸಲಾಗಿದ್ದು, ಒಟ್ಟು 50 ಮಿಲಿಯ ಅದೃಷ್ಟಶಾಲಿಗಳು ಇವುಗಳನ್ನು ಪಡೆಯಲಿದ್ದಾರೆ. ಕೆಲವು ಅದೃಷ್ಟಶಾಲಿಗಳು ಪೂರ್ಣ ಒಂದು ಲಕ್ಷ ರೂ.ಗಳ ಮೊತ್ತಕ್ಕೆ ಒಡೆಯರಾಗಬಹುದು.

ಕೊಡುಗೆಗಳಿಗೆ ಅರ್ಹರಾಗಲು ಬಳಕೆದಾರರು ಗೂಗಲ್ ಪೇ ಆ್ಯಪ್‌ನ್ನು ಬಳಸಿ ಕನಿಷ್ಠ ಐದು ವಹಿವಾಟುಗಳನ್ನು ನಡೆಸಿರಬೇಕು. ವ್ಯಕ್ತಿಯಿಂದ ವ್ಯಕ್ತಿಗೆ(ಪಿ2ಪಿ) ಮತ್ತು ಇತರ ಗೂಗಲ್ ಪೇ ಬಳಕೆದಾರರಿಗೆ ನಗದುರೂಪದ ವಹಿವಾಟುಗಳು,ಇತರ ಬ್ಯಾಂಕ್ ಖಾತೆಗಳಿಗೆ ಹಣಪಾವತಿ,ವ್ಯಾಪಾರಿಗಳಿಗೆ ಹಣಪಾವತಿ,ಗೂಗಲ್ ತೇಝ್ ಯುಪಿಐ ಐಡಿ ಬಳಸಿ ಪಾವತಿ ಇವು ಈ ಕೊಡುಗೆಗೆ ಅರ್ಹವಾಗುತ್ತವೆ. ಬಳಕೆದಾರರು ಕನಿಷ್ಠ ಐದು ವಹಿವಾಟುಗಳನ್ನು ಮುಂಬರುವ ಸೆ.18ರಂದು ಬೆಳಿಗ್ಗೆ ಒಂಭತ್ತು ಗಂಟೆಯೊಳಗೆ ಪೂರ್ಣಗೊಳಿಸಿರಬೇಕು. ಬಳಕೆದಾರರು ಕಳುಹಿಸುವ ಅಥವಾ ಸ್ವೀಕರಿಸುವ ವಹಿವಾಟುಗಳ ಸಂಖ್ಯೆ ಹೆಚ್ಚಿಗೆ ಇದ್ದಷ್ಟೂ ಹೆಚ್ಚಿನ ಬೋನಸ್ ಗಳನ್ನು ಗೆಲ್ಲುವ ಅವಕಾಶಗಳು ಹೆಚ್ಚಾಗಿರುತ್ತವೆ.

ಅಂದ ಹಾಗೆ ಈ ಯೋಜನೆಗೆ ಕೆಲವು ನಿಯಮ-ನಿಬಂಧನೆಗಳೂ ಇವೆ.

ಬಳಕೆದಾರರು ವಹಿವಾಟುಗಳನ್ನು ನಡೆಸಲು ತೇಝ್ ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಸಬೇಕು.

ಪ್ರತಿ ತೇಝ್ ಗ್ರಾಹಕರು ತೇಝ್ ಕ್ರೆಡೆನ್ಶಿಯಲ್ಸ್‌ನ ಒಂದು ಸೆಟ್ ಅನ್ನು ಮಾತ್ರ ಬಳಸಬಹುದಾಗಿದೆ.

ಬಳಕೆದಾರರು ಗೆಲ್ಲುವ ಪ್ರತಿ ಬಹುಮಾನದ ಮೊತ್ತ ಅವರ ನಿಯೋಜಿತ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಪಾವತಿಯನ್ನು ಸ್ವೀಕರಿಸಲು ಬಳಕೆದಾರರು ಯುಪಿಐ-ಎನೇಬಲ್ಡ್ ಬ್ಯಾಂಕ್ ಖಾತೆಯನ್ನು ತಮ್ಮ ಆಯಾ ತೇಝ್ ಖಾತೆಗಳಿಗೆ ಜೋಡಣೆಗೊಳಿಸಿರಬೇಕು.

ಬಹುಮಾನಗಳ ಮೇಲೆ ಅನ್ವಯಿಸುವ ತೆರಿಗೆಯನ್ನು ಗೂಗಲ್ ಕಡಿತಗೊಳಿಸಬಹುದು.

ತಮಿಳುನಾಡು ಹೊರತುಪಡಿಸಿ ದೇಶದ ಎಲ್ಲೆಡೆ ಈ ಯೋಜನೆ ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News