ನೋಟು ಅಮಾನ್ಯೀಕರಣ ವಿಫಲ ಪ್ರಯೋಗ: ಯಶವಂತ್ ಸಿನ್ಹಾ

Update: 2018-08-29 15:38 GMT

ಬೆಂಗಳೂರು, ಆ.29: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೋಟು ಅಮಾನ್ಯೀಕರಣ ವಿಫಲ ಪ್ರಯೋಗವಾಗಿದ್ದು, ಇದರಿಂದ ಅಸಂಘಟಿತ ಕಾರ್ಮಿಕರು ಹಾಗೂ ಸಣ್ಣ ಉದ್ಯಮಿಗಳು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅಭಿಪ್ರಾಯಿಸಿದರು.

ಬುಧವಾರ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ನಗರದ ಭಾರತೀಯ ವಿದ್ಯಾಭವನದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 92ನೆ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ಭಾರತದ ಇಂದಿನ ಆರ್ಥಿಕ ಸ್ಥಿತಿಗತಿ’ ವಿಷಯದ ಕುರಿತು ಅವರು ಮಾತನಾಡಿದರು. ನೋಟು ಅಮಾನ್ಯೀಕರಣದಿಂದ ಕಪ್ಪು ಹಣ ಬಯಲಿಗೆ ಬರಲಿದೆ ಎಂದು ಕೇಂದ್ರ ಸರಕಾರ ಜನತೆಗೆ ಆಶ್ವಾಸನೆ ನೀಡಿತ್ತು. ಆದರೆ, ನೋಟು ಅಮಾನ್ಯೀಕರಣ ಆದೇಶದ ನಂತರ ಆರ್‌ಬಿಐಗೆ ಶೇ.99.4ರಷ್ಟು ಹಣ ವಾಪಸ್ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾದರೆ ದೇಶದಲ್ಲಿರುವ ಕಪ್ಪು ಹಣ ಎಲ್ಲಿಗೆ ಹೋಯಿತು ಎಂದು ಅವರು ಪ್ರಶ್ನಿಸಿದರು.

ಯುಪಿಎ ಆಡಳಿತದಲ್ಲಿ ಬ್ಯಾಂಕ್‌ಗಳಿಗೆ ಬರಬೇಕಾದ ಸಾಲ ಮೊತ್ತ 2 ಲಕ್ಷ ಕೋಟಿ ರೂ. ಆಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ ಇದು 14 ಲಕ್ಷ ಕೋಟಿ ರೂ.ಮೀರಿದೆ. ದೊಡ್ಡ ಉದ್ಯಮಿಗಳು ಮಾಡಿರುವ ಸಾಲವನ್ನು ವಾಪಸ್ ಪಡೆಯುವಲ್ಲಿ ಆರ್‌ಬಿಐ ಹಾಗೂ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಹಣಕಾಸು ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಂಕಿ ಅಂಶಗಳು ನಂಬಿಕೆಗೆ ಅರ್ಹವಾಗಿಲ್ಲ. ಕೇಂದ್ರ ಸರಕಾರ ವಾಸ್ತವ ಅಂಕಿ ಅಂಶಗಳನ್ನು ಮರೆ ಮಾಚಿ, ರಾಜಕೀಯ ಮಾಡುತ್ತಿದೆ. ಒಂದು ಉದ್ಯೋಗ ಸೃಷ್ಟಿಸಿದ್ದನ್ನು 20 ಉದ್ಯೋಗ ಸೃಷ್ಟಿಸಿದ್ದೇವೆಂದು ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಿವೆ ಎಂದು ಅವರು ಹೇಳಿದರು.

ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೂರದೃಷ್ಟಿತ್ವವುಳ್ಳವರಾಗಿದ್ದರು. ಯುವ ಶಕ್ತಿಯ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದರು. ಅವರ ಸಮಯ ಪ್ರಜ್ಞೆ, ಶಿಸ್ತು ಈಗಿನ ರಾಜಕೀಯ ನಾಯಕರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸತ್ಯನಾರಾಯಣ, ವಿಜಯಮ್ಮ ಹಾಗೂ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಪತ್ರಕರ್ತ ಸುಗತ ಶ್ರೀನಿವಾಸ ರಾಜು, ಸಭಾಪತಿ ಬಸವರಾಜ ಹೊರಟ್ಟಿ, ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಅಧ್ಯಕ್ಷೆ ಮಮತಾ ನಿಚಾನಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News