ಅಕ್ರಮ ಹಣ ವರ್ಗಾವಣೆ ವಿಚಾರ: ಡಿಕೆಶಿ ಆಪ್ತ ಸಚಿನ್ ನಾರಾಯಣ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್
ಬೆಂಗಳೂರು, ಆ.29: ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಹಾಗೂ ಸುಳ್ಳು ಮಾಹಿತಿ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಉದ್ಯಮಿ ಸಚಿನ್ ನಾರಾಯಣ್ ವಿರುದ್ಧ ನಗರದ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಮತ್ತೊಮ್ಮೆ ವಿಸ್ತರಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಆದಾಯ ತೆರಿಗೆ ಇಲಾಖೆ ಪ್ರಧಾನ ನಿರ್ದೇಶಕರು ನೀಡಿದ್ದ ಪೂರ್ವಾನುಮತಿ ಮತ್ತು ವಿಶೇಷ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ಸಚಿನ್ ನಾರಾಯಣ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಸಂಬಂಧ ಜುಲೈ 30ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಈ ಆದೇಶವನ್ನು ಮತ್ತೊಂದು ವಾರ ವಿಸ್ತರಿಸಿ ಬುಧವಾರ ಆದೇಶಿಸಿತು. ಅರ್ಜಿಯನ್ನು ಮುಂದಿನ ವಿಚಾರಣೆಯನ್ನು ಸೆ.6ಕ್ಕೆ ನಿಗದಿಪಡಿಸಲಾಗಿದೆ.
ಇದೇ ಪ್ರಕರಣದ ಮತ್ತೊಬ್ಬ ಆರೋಪಿ ನಾರಾಯಣ ಸತಪ್ಪ ಎಂಬವರ ಪ್ರಕರಣದ ಅಧೀನ ನ್ಯಾಯಾಲಯದ ವಿಚಾರಣೆಗೂ ಹೈಕೋರ್ಟ್ ಈ ವೇಳೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
2017ರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ ಹಾಗೂ ಹೊಸದಿಲ್ಲಿಯ ಕರ್ನಾಟಕ ಭವನ, ಸಫ್ದರ್ ಜಂಗ್ ಫ್ಲಾಟ್‌ಗಳ ಮೇಲೆ ದಾಳಿ ನಡೆಸಿದ್ದ ವೇಳೆ ದೊರೆತ ಹಣ, ಡೈರಿ ಸೇರಿ ಇನ್ನಿತರೆ ದಾಖಲೆಗಳಲ್ಲಿ ವಶಪಡಿಸಿಕೊಂಡಿದ್ದ ಐಟಿ ಅಧಿಕಾರಿಗಳು, ಸಚಿನ್ ನಾರಾಯಣ್, ನಾರಾಯಣ ಸತಪ್ಪ ಸೇರಿದಂತೆ ಇನ್ನಿತರ ವಿರುದ್ಧ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಸಚಿನ್ ನಾರಾಯಣ್ ಸೇರಿ ಇತರೆ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿಗೂ ದಾಖಲೆಗಳಲ್ಲಿರುವ ಮಾಹಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಐಟಿ ಇಲಾಖೆ ನಿರ್ದೇಶಕರು ಟಿ.ಸುನೀಲ್ ಗೌತಮ್ ಜೂ.20ರಂದು ದಾಖಲಿಸಿದ್ದ ದೂರಿನಲ್ಲಿ ಆರೋಪಿಸಿದ್ದರು.