ಪರಿಸರದ ಬಗೆಗಿನ ಕಾಳಜಿ ಹೆಚ್ಚಿಸಿಕೊಳ್ಳಬೇಕು: ಪೇಜಾವರ ಶ್ರೀ

Update: 2018-08-29 15:57 GMT

ಬೆಂಗಳೂರು, ಆ.29: ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಸರಕಾರ ಹಾಗೂ ನಾಗರಿಕರು ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ಇಂತಹ ಅನಾಹುತಗಳಿಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿ ಅಭಿಪ್ರಾಯಪಟ್ಟರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರದ ಬಗ್ಗೆ ಗಮನ ಹರಿಸದೆ ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾದರೆ, ಜನರೇ ಮುಂದಿನ ದಿನಗಳಲ್ಲಿ ಎದುರಾಗುವ ಅನಾಹುತಗಳಿಗೆ ಕಾರಣವಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವು ನಮ್ಮ ಮನಸ್ಸಿಗೆ ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಕೊಡಗು ಹಾಗೂ ಕೇರಳಕ್ಕೆ ತಲಾ 10 ಲಕ್ಷ ರೂ.ಗಳನ್ನು ಮಠದ ವತಿಯಿಂದ ನೆರವು ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಪರಿಹಾರ ಕಾರ್ಯಕ್ಕಾಗಿ ಸಾರ್ವಜನಿಕರಿಂದಲೂ ದೇಣಿಗೆ ಸಂಗ್ರಹಿಸಿ ನೀಡುತ್ತೇವೆ ಎಂದು ಅವರು ಹೇಳಿದರು.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿವೆ. ಪರಿಸರ ಉಳಿಯಬೇಕು ಎಂಬುದು ನಮ್ಮ ಉದ್ದೇಶ. ವಿಜ್ಞಾನಿಗಳು ಹಾಗೂ ತಜ್ಞರು, ಬಯಲುಸೀಮೆ, ಕರಾವಳಿ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಎಲ್ಲರ ಹಿತ ಕಾಪಾಡುವ ನಿಟ್ಟಿನಲ್ಲಿ ಸರಕಾರ ನಿರ್ಧಾರ ಕೈಗೊಳ್ಳಬೇಕು. ಚರ್ಚೆಗೆ ಕರೆದರೆ ನಾನು ಹೋಗುತ್ತೇನೆ ಎಂದರು.

ಶಿರೂರು ಶ್ರೀಗಳ ಅಸಹಜ ಸಾವಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ನಮ್ಮ ಹಾಗೂ ಅವರ ನಡುವೆ ಇದ್ದದ್ದು ಧಾರ್ಮಿಕ ಬೇಸರ ಮಾತ್ರ. ನಾನು ಹಲವಾರು ಬಾರಿ ಅವರನ್ನು ಪೊಲೀಸರಿಂದ ರಕ್ಷಿಸಿದ್ದೇನೆ. ಆದರೆ, ನನ್ನ ವಿರುದ್ಧವೇ ಅವರು ಇಲ್ಲ-ಸಲ್ಲದ ಅನೈತಿಕ ಆರೋಪ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 5 ಕೋಟಿ ರೂ.ಗಳನ್ನು ಮಠದ ವತಿಯಿಂದ ನೀಡಲಾಗಿದೆ. ಉಡುಪಿಯ ಪಾಜಕದಲ್ಲಿ ಸುಮಾರು 40 ಎಕರೆ ಭೂಮಿಯಲ್ಲಿ ಹಿಂದೂ ಧರ್ಮ, ತತ್ವಜ್ಞಾನದ ಶಿಕ್ಷಣದ ಜತೆ ಕಾಲೇಜು ಶಿಕ್ಷಣ ನೀಡುವ ಕಾಲೇಜು ನಿರ್ಮಿಸುತ್ತಿದ್ದೇವೆ. ಅದೇ ರೀತಿ ಹುಬ್ಬಳ್ಳಿಯಲ್ಲಿ 10 ಎಕರೆ ಜಾಗದಲ್ಲಿ ಕಾಲೇಜು ಹಾಗೂ ರಾಯಚೂರಿನಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News