ಎಲೆಕ್ಟ್ರಿಕ್ ಬಸ್ಸುಗಳು ಇಂದಿನ ಅನಿವಾರ್ಯ: ಡಾ.ಜಿ. ಪರಮೇಶ್ವರ್

Update: 2018-08-29 15:58 GMT

ಬೆಂಗಳೂರು, ಆ.29: ಇನ್ನು ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಡಿಸೇಲ್ ಹಾಗೂ ಪೆಟ್ರೋಲ್ ಬಸ್ಸುಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ಬಸ್ಸುಗಳು ಸಂಚರಿಸಲಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಬುಧವಾರ ನಗರದ ಹೊರವಲಯದಲ್ಲಿರುವ ಅಂತರ್‌ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತರ್‌ರಾಷ್ಟ್ರೀಯ 8ನೇ ಬಸ್ ವರ್ಲ್ಡ್ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ಕಳೆದ 20 ವರ್ಷದಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಐಟಿ-ಬಿಟಿ, ಕೈಗಾರಿಕೆ, ವಿಜ್ಞಾನ , ಸಂಶೋಧನೆ, ಏರೋ ಸ್ಪೇಸ್ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಬೆಂಗಳೂರು ಕೇಂದ್ರವಾಗಿದೆ. ಇಲ್ಲಿ ಮೂಲ ಸಮಸ್ಯೆ ಎಂದರೆ ಟ್ರಾಫಿಕ್. ಬೆಂಗಳೂರಿನಲ್ಲಿ ನಿತ್ಯ 70 ಲಕ್ಷ ವಾಹನಗಳು ಸಂಚರಿಸುತ್ತಿವೆ. ಆದರೆ ಈ ವಾಹನಗಳಿಗೆ ವ್ಯವಸ್ಥಿತ ರಸ್ತೆಗಳಿಲ್ಲ ಎಂದು ಅವರು ಹೇಳಿದರು.

ಡಿಸೇಲ್, ಪೆಟ್ರೋಲ್ ಬಸ್‌ಗಳಿಂದ ವಾಯುಮಾಲಿನ್ಯ ಕೂಡ ಹೆಚ್ಚಾಗಿದೆ. ಅಷ್ಟೆ ಅಲ್ಲದೆ ಬಿಎಂಟಿಸಿಯಿಂದ 6 ಸಾವಿರ ವಾಹನಗಳು ಸಂಚರಿಸುತ್ತಿವೆ. ಈ ಎಲ್ಲವೂ ಡಿಸೇಲ್ ಬಸ್ಸುಗಳು ಆಗಿರುವುದರಿಂದ ವಾಯುಮಾಲಿನ್ಯ ಕೂಡ ಹೆಚ್ಚುತ್ತಿದೆ. ಹೀಗಾಗಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುವುದು ಉತ್ತಮ ಎಂದು ಪರಮೇಶ್ವರ್ ತಿಳಿಸಿದರು.

ಹೈದರಾಬಾದ್ ನಿಂದ ಬೆಂಗಳೂರಿಗೆ ವರ್ಷದ ತೆರಿಗೆ 26 ಲಕ್ಷ ರೂ. ಪಾವತಿಸಬೇಕಿದೆ. ಈ ನಿಯಮವನ್ನು ಸಡಿಲಿಸಿ, ತೆರಿಗೆ ಕಡಿಮೆ ಮಾಡುವ ಕುರಿತು ಚರ್ಚಿಸಲಾಗುವುದು. ಈ ಬಾರಿ ಬಸ್ ವರ್ಲ್ಡ್ ಬೆಂಗಳೂರಿನಲ್ಲಿ ನಡೆಯುತ್ತಿರುವುದು ನಮ್ಮ ನಗರಕ್ಕೆ ಹೆಮ್ಮೆಯ ವಿಚಾರ. ಇದರಿಂದ ಸಾರಿಗೆ ಕ್ಷೇತ್ರದಲ್ಲಿ ಹೂಡಿಕೆ ಕೂಡ ಹೆಚ್ಚುವ ನಿರಿೀಕ್ಷೆ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News