ಆಡಳಿತಾತ್ಮಕ ನಿರ್ಧಾರ, ಹಣಕಾಸಿನ ವ್ಯವಹಾರ ನಡೆಸದಂತೆ ಹೈಕೋರ್ಟ್ ಸೂಚನೆ

Update: 2018-08-29 17:04 GMT

ಬೆಂಗಳೂರು, ಆ.29: ರಾಜ್ಯ ಒಕ್ಕಲಿಗರ ಸಂಘಕ್ಕೆ ಸರಕಾರ ನೇಮಿಸಿರುವ ಆಡಳಿತಾಧಿಕಾರಿ ಸಂಘಕ್ಕೆ ಸಂಬಂಧಿಸಿದಂತೆ ಯಾವುದೇ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಹಣಕಾಸಿನ ವ್ಯವಹಾರ ನಡೆಸದಂತೆ ಹೈಕೋರ್ಟ್ ಸೂಚಿಸಿದೆ.

ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಸರಕಾರದ ಕ್ರಮ ಪ್ರಶ್ನಿಸಿ ಡಾ. ಶಿವಲಿಂಗಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಅರವಿಂದ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಂಘದ ಪರ ವಕೀಲರಾದ ಎಂ.ಎಸ್ ಪಾರ್ಥಸಾರಥಿ ವಾದ ಮಂಡಿಸಿ, ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡು ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶಿಸಿದೆ.

ಸರಕಾರದ ಈ ನಿರ್ಧಾರ ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯಿದೆ 1960ರ ನಿಯಮ 27(ಎ) ಗೆ ವಿರುದ್ಧವಾಗಿದೆ. ಯಾವುದೇ ಸಂಘ ಸಂಸ್ಥೆಗೆ ಇಂತಹ ಆಡಳಿತಾಧಿಕಾರಿಯನ್ನು ನೇಮಿಸಬೇಕಿದ್ದರೆ, ಮೊದಲು ತನಿಖೆ ನಡೆಸಬೇಕು. ನಂತರ ತನಿಖೆಯಲ್ಲಿ ಆರೋಪಗಳು ಸತ್ಯ ಎಂದು ಕಂಡು ಬಂದಲ್ಲಿ ಆಡಳಿತಾಧಿಕಾರಿ ನೇಮಿಸಬೇಕು. ಆದರೆ ಸರಕಾರ ಇಂತಹ ಯಾವ ಕ್ರಮವನ್ನೂ ಅನುಸರಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಆಡಳಿತಾಧಿಕಾರಿ ನೇಮಿಸಿರುವುದು ನಿಯಮಬಾಹಿರ ಎಂದು ದೂರಿದರು.

ಸಂಘದ ಪರ ವಕೀಲರ ವಾದ ದಾಖಲಿಸಿಕೊಂಡ ಪೀಠ, ನ್ಯಾಯಾಲಯದ ಮುಂದಿನ ಆದೇಶದವರೆಗೂ ಸರಕಾರ ನೇಮಿಸಿರುವ ಆಡಳಿತಾಧಿಕಾರಿ ಸಂಘಕ್ಕೆ ಸಂಬಂಧಿಸಿದಂತೆ ಯಾವುದೇ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬಾರದು. ಹಾಗೂ ಸಂಘದ ಯಾವುದೇ ಹಣಕಾಸು ವ್ಯವಹಾರ ನಡೆಸಬಾರದು ಎಂದು ಸೂಚಿಸಿ, ವಿಚಾರಣೆಯನ್ನು ಮುಂದಿನ ಸೆ.4 ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News