ಸೆಪ್ಟೆಂಬರ್‌ನಲ್ಲಿ ಉದ್ಯೋಗ ಮೇಳ: ಆರ್.ವಿ.ದೇಶಪಾಂಡೆ

Update: 2018-08-29 17:22 GMT

ಬೆಂಗಳೂರು, ಆ.29: ಯುವಜನರಿಗೆ ಉದ್ಯೋಗ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ ಸೆಪ್ಟೆಂಬರ್ ಕೊನೆಯ ವಾರದ ಹೊತ್ತಿಗೆ ಬೆಂಗಳೂರಿನಲ್ಲಿ ಎರಡು ದಿನಗಳ ಉದ್ಯೋಗ ಮೇಳವನ್ನು ನಡೆಸಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಈ ಸಂಬಂಧ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ನಡೆಸುತ್ತಿರುವ ಈ ಮೇಳದಲ್ಲಿ ಸರಿಸುಮಾರು 200 ಕಂಪೆನಿಗಳು ಭಾಗವಹಿಸಲಿವೆ ಎಂದು ಹೇಳಿದರು.

ಜೊತೆಗೆ ಮುಂಬರುವ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ 4-5 ಜಿಲ್ಲೆಗಳ ವ್ಯಾಪ್ತಿಗೆ ಒಂದರಂತೆ ಇಂತಹ ಮೇಳಗಳನ್ನು ಹಮ್ಮಿಕೊಳ್ಳಲಾಗುವುದು. ದೂರದ ಜಿಲ್ಲೆಗಳ ಯುವಜನರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಮ್ಮಲ್ಲಿ ಇಂಜಿನಿಯರಿಂಗ್ ಮತ್ತು ಇತರೆ ಪದವೀಧರರಿಗೇನೂ ಕೊರತೆಯಿಲ್ಲ. ಆದರೆ, ಎಲ್ಲ ಪದವೀಧರರಿಗೂ ಕೆಲಸ ಸಿಗುತ್ತಿಲ್ಲ. ಹೀಗಾಗಿ, ನಿರುದ್ಯೋಗ ಸಮಸ್ಯೆಯು ಭೂತಾಕಾರವಾಗಿ ಬೆಳೆದಿದೆ. ಇದನ್ನು ನಿವಾರಿಸಲು ಯುವಜನರಿಗೆ ಅಗತ್ಯ ಕೌಶಲ್ಯಗಳನ್ನು ಒದಗಿಸಿ, ಅವರನ್ನೆಲ್ಲ ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಕೂಡ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಇಂತಹ ಅರ್ಜಿಗಳಿಗೆ ಸ್ಪಂದಿಸಲೆಂದೇ ಕೌಶಲಾಭಿವೃದ್ಧಿ ಇಲಾಖೆಯ ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಜೊತೆಗೆ ಈ ಪಟ್ಟಿಯನ್ನು ಕಾಸಿಯಾದಂತಹ ಔದ್ಯಮಿಕ ಸಂಘಟನೆಗೆ ನೀಡಲಾಗುವುದು ಎಂದು ತಿಳಿಸಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಎಲ್ಲ ಉದ್ದಿಮೆ ಸಂಸ್ಥೆಗಳೂ ಇಲಾಖೆಯ kaushalkar.com ಜಾಲತಾಣದಲ್ಲಿ ತಮ್ಮ ಹೆಸರನ್ನು ವೃತ್ತಿ ಕೌಶಲ್ಯ ತರಬೇತಿದಾರರಾಗಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಿದರು. ಸಭೆಯಲ್ಲಿ ಎಫ್‌ಕೆಸಿಸಿಐ ಕಾಸಿಯಾ, ಅವೇಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News