ಭಿಕ್ಷೆ ಮತ್ತು ಹಕ್ಕು

Update: 2018-08-29 18:38 GMT

ಭಾರತದಲ್ಲಿ ಭಿಕ್ಷುಕರ ಅಸ್ಥಿತ್ವವು ಕಾನೂನಾತ್ಮಕವಾಗಿ ಸದಾ ಅತಂತ್ರವಾಗಿಯೇ ಇದೆ. 1969ರಲ್ಲಿ ಜಾರಿಯಾದ 'ಬಾಂಬೇ ಬಿಕ್ಷಾಟನೆ ನಿಷೇಧ ಕಾಯ್ದೆ' (ಬಾಂಬೆ ಪ್ರಿವೆನ್ಷನ್ ಆಫ್ ಬೆಗ್ಗಿಂಗ್ ಆ್ಯಕ್ಟ್)ಯೇ ದಶಕಗಳ ಕಾಲದಿಂದಲೂ ಆಚರಣೆಯಲ್ಲಿದ್ದು ಅದು ಬಡತನವನ್ನು ಅಪರಾಧದೊಂದಿಗೆ ಸಮೀಕರಿಸುತ್ತದೆ. ಹೀಗಾಗಿ ಈ ಕಾಯ್ದೆಯ ಪ್ರಕಾರ ಭಿಕ್ಷುಕರನ್ನು ಯಾವುದೇ ವಾರಂಟ್ ಇಲ್ಲದೆ ಕೇವಲ ಅನುಮಾನದ ಆಧಾರದ ಮೇಲೆ ಬಂಧಿಸಿ ಸಾರ್ವಜನಿಕ ಸ್ಥಳಗಳಿಂದ ಹೊರಗಿಡಬಹುದು. ಆದ್ದರಿಂದಲೇ, ಭಿಕ್ಷುಕರ ಮೇಲೆ ದಾಳಿ ನಡೆಸಿ ಅವರನ್ನು ನಗರದಾಚೆಗೆೆ ದೂಡಿಬರುವುದು ನಗರವನ್ನು ಸ್ವಚ್ಛವಾಗಿರಿಸುವ ಕ್ರಮಗಳ ಅನಿವಾರ್ಯ ಭಾಗವಾಗಿಬಿಟ್ಟಿದೆ. ವಿದೇಶಿಯರ ಕಣ್ಣಲ್ಲಿ ಭಾರತದ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದು ಸಾರ್ವಜನಿಕವಾಗಿ ನಿಷೇಧಕ್ಕೊಳಗಾಗುವ ಜನರ ಸ್ಥಿತಿಗತಿಗಳಿಗಿಂತಲೂ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆಯುತ್ತದೆ.

ಈ ತಿಂಗಳ ಆರಂಭದಲ್ಲಿ ದಿಲ್ಲಿ ಹೈಕೋರ್ಟು ತನ್ನ ಒಂದು ತೀರ್ಪಿನ ಮೂಲಕ ಈ ದೃಷ್ಟಿಕೋನವನ್ನು ತಿದ್ದಲು ಪ್ರಯತ್ನಿಸಿದೆ ಮತ್ತು ಭಿಕ್ಷಾಟನೆಯು ನಮ್ಮ ವ್ಯವಸ್ಥೆಯ ರಾಚನಿಕ ಸಮಸ್ಯೆಯಾಗಿದೆಯೆಂಬುದನ್ನು ಒಪ್ಪಿಕೊಂಡಿದೆ. ಪ್ರಭುತ್ವವು ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರನ್ನು ಶಿಕ್ಷಿಸುವ ಮತ್ತು ಅದರ ಜೊತೆಗೆ ಗಾಯದ ಮೇಲೆ ಉಪ್ಪುಸವರುವ ಕ್ರಮಗಳನ್ನು ತೆಗೆದುಕೊಳ್ಳುವುದು ಅನ್ಯಾಯ ಎಂದು ನ್ಯಾಯಾಲಯವು ಪ್ರತಿಪಾದಿಸಿದೆ ಮತ್ತು ಆ ಕಾಯ್ದೆಯಲ್ಲಿದ್ದ ಭಿಕ್ಷಾಟನೆಯನ್ನು ಶಿಕ್ಷಾರ್ಹ ಅಪರಾಧವಾಗಿಸುವ ಅಂಶಗಳನ್ನು ರದ್ದುಗೊಳಿಸಿದೆ. ಆದರೆ ಈ ಆದೇಶವು ದಿಲ್ಲಿ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ. ಭಿಕ್ಷಾಟನೆ ವಿರೋಧಿ ಕಾಯ್ದೆಯ ಬಲಿಪಶುಗಳ ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಗಳ ಕಾರಣದಿಂದ ಯಾರೂ ಅವರ ಬೆಂಬಲಕ್ಕೆ ಬರುವುದಿಲ್ಲ. ಈ ಕಾಯ್ದೆಯ ಪ್ರಕಾರ ಭಿಕ್ಷುಕರನ್ನು, ಬೀದಿಬದಿ ವ್ಯಾಪಾರಿಗಳನ್ನು, ಚಿಂದಿ ಆಯುವವರನ್ನು ಮತ್ತು ವಲಸಿಗರನ್ನು ಒಳಗೊಂಡಂತೆ ಅನಧಿಕೃತ ವ್ಯಕ್ತಿಗಳನ್ನು ಯಾವುದೇ ವಾರಂಟ್ ಇಲ್ಲದೆ ಬಂಧಿಸಬಹುದು ಅಥವಾ ಸ್ವಂತ ಬಾಂಡಿನ ಮೇಲೆ ಬಿಡುಗಡೆ ಮಾಡಬಹುದು ಹಾಗೂ ಒಂದು ಪ್ರಮಾಣಿತ ಸಂಸ್ಥೆಯ ಸುಪರ್ದಿನಲ್ಲಿ ಮೂರು ವರ್ಷಗಳ ಕಾಲ ಬಂಧಿಸಿಡುವ ಮತ್ತು ಅದೇ ರೀತಿಯ ಅಪರಾಧವನ್ನು ಮತ್ತೆ ಮಾಡಿ ಬಂಧನಕ್ಕೊಳಗಾದರೆ 10 ವರ್ಷಗಳ ಕಾಲ ಅಂತಹ ಸಂಸ್ಥೆಗಳ ಸುಪರ್ದಿನಲ್ಲಿ ಬಂಧನದಲ್ಲಿರಿಸುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಬಾಂಬೆ ಕಾಯ್ದೆಯ ಮಟ್ಟಿಗಂತೂ ಇದು ಅಕ್ಷರಶಃ ಸತ್ಯವಾಗಿದೆ. ಮಾತ್ರವಲ್ಲ, ಅದು ಭಿಕ್ಷುಕರ ಅವಲಂಬಿತ ಬಳಗವನ್ನೂ ಬಂಧಿಸಲು ಅವಕಾಶವನ್ನು ಕೋರುತ್ತದೆ. ಒಟ್ಟು ಸಾರಾಂಶದಲ್ಲಿ ಇದು ಭಿಕ್ಷುಕರನ್ನು ಕಾನೂನಾತ್ಮಕವಾಗಿ ಹೊರಗಿನವರನ್ನಾಗಿಸುತ್ತದೆ:

ಭಾರತವೆಂಬ ಒಂದೇ ಭೌಗೋಳಿಕ ವಲಯದಲ್ಲಿ ಬದುಕುತ್ತಿದ್ದರೂ ಭಾರತದ ಸಂವಿಧಾನವು ನೀಡುವ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಅವರಿಗೆ ನಿರಾಕರಿಸಲಾಗಿದೆ. ನಾಗರಿಕತ್ವದೊಂದಿಗೆ ಹಕ್ಕುಗಳೂ ಒದಗಿ ಬರಬೇಕು. ಆದರೆ ವ್ಯಕ್ತಿಗಳು ಅದನ್ನು ತಮಗೆ ಮಾನ್ಯತೆ ಮತ್ತು 'ಗೌರವ'ಗಳನ್ನು ತಂದುಕೊಡುವ ಸೌಲಭ್ಯಗಳ ಮೂಲಕ ಕೊಂಡುಕೊಳ್ಳಬೇಕೆಂಬ ಪ್ರಭುತ್ವದ ಇರಾದೆಯೇ ಈ ಗ್ರಹಿಕೆಯ ಹಿಂದಿರುವಂತಿದೆ.

 ಇದರ ಬಗ್ಗೆ ನಡೆದಿರುವ ಅಧ್ಯಯನಗಳ ಪ್ರಕಾರ ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಯಾವುದೇ ಕಾನೂನಾತ್ಮಕ ವಿಧಿವಿಧಾನಗಳನ್ನು ಅನುಸರಿಸದೆ ಶಿಕ್ಷೆಗೆ ಗುರಿ ಮಾಡಿದ ಕೂಡಲೇ ಅವರನ್ನು ಸಾರಾಸಗಟು ಭಿಕ್ಷುಕರ ನಿರಾಶ್ರಿತರ ಕೇಂದ್ರಕ್ಕೆ ಅಟ್ಟುತ್ತಾರೆ. ಭಿಕ್ಷುಕರನ್ನು ಬಂಧಿಸಲು ಆ ವ್ಯಕ್ತಿಗಳು ಭಿಕ್ಷುಕರೇ ಆಗಬೇಕಿಲ್ಲ. ಭಿಕ್ಷುಕರಂತೆ ಕಂಡರೆ ಸಾಕು. ಭಿಕ್ಷುಕರ ನಿರಾಶ್ರಿತ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಅಪಾರವಾಗಿರುತ್ತವೆ ಮತ್ತು ಅವು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುತ್ತವೆ ಮತ್ತು ಅಲ್ಲಿನ ಬಂದಿಗಳನ್ನು ಬಿಟ್ಟಿ ಕೂಲಿಗಳನ್ನಾಗಿ ದುಡಿಸಿಕೊಳ್ಳಲಾಗುತ್ತದೆ. ಕಾಗದದ ಮೇಲೆ ಅವರೆಲ್ಲರಿಗೂ ವೃತ್ತಿ ಕೌಶಲ್ಯಗಳನ್ನು ಕಲಿಸಿಕೊಡಬೇಕೆಂದಿದೆ. ಆದರೆ ವಾಸ್ತವದಲ್ಲಿ ಅದೇನೂ ನಡೆಯದೆ ಅದೇ ಹತಾಶ ಪರಿಸ್ಥಿತಿಯಲ್ಲಿ ಅವರು ಹೊರಬರುತ್ತಾರೆ. 2006ರ ರಾಮ್ ಲಖನ್ ಮತ್ತು ಪ್ರಭುತ್ವದ ಪ್ರಕರಣನ್ನು ಈ ಕಾಯ್ದೆಗೆ ಸಂಬಂಧಪಟ್ಟಂತೆ ಅತ್ಯಂತ ಪ್ರಮುಖ ನ್ಯಾಯವ್ಯಾಖ್ಯಾನವನ್ನು ಕೊಟ್ಟ ಪ್ರಕರಣವೆಂದು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಭಿಕ್ಷುಕರೊಬ್ಬರನ್ನು ಬಂಧಿಸಿ, ಶಿಕ್ಷೆಗೆ ಗುರಿ ಮಾಡಲಾಯಿತು. ಆದರೆ ಅವರನ್ನು ಪ್ರಮಾಣಿತ ಸಂಸ್ಥೆಯ ಸುಪರ್ದಿಗೆ ನೀಡದೆ ಒಂದು ವರ್ಷ ಕಾಲ ತಿಹಾರ್ ಜೈಲಿಗೆ ಕಳುಹಿಸಲಾಯಿತು.

ಈ ಪ್ರಕರಣದಲ್ಲಿ ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಒಂದು ಕ್ರಿಮಿನಲ್ ಗ್ಯಾಂಗಿನ ಬೆದರಿಕೆಗೆ ಒಳಗಾಗಿ ಭಿಕ್ಷಾಟನೆ ಮಾಡುವುದಕ್ಕೂ ಮತ್ತು ಬಡತನ, ಹಸಿವು ಮತ್ತು ಇತರ ಆಯ್ಕೆಗಳಿಲ್ಲದ ಕಾರಣಗಳಿಂದಾಗಿ ಭಿಕ್ಷಾಟನೆ ಮಾಡುವುದಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಗಮನ ಸೆಳೆದಿದ್ದಾರೆ. ಹಾಗೂ ''ಭಿಕ್ಷುಕರು ಬದುಕುಳಿಯಲು ಭಿಕ್ಷಾಟನೆ ಮಾಡುತ್ತಾರೆ. ಯಾವುದೇ ನಾಗರಿಕ ಸಮಾಜದಲ್ಲಿ ಈ ಬಗೆಯ ಪರಿಸ್ಥಿತಿಯಲ್ಲೂ ಒಂದು ವರ್ಗದ ಜನರು ಬದುಕುತ್ತಿರುವುದು ಕಳಂಕ ಮಾತ್ರವಲ್ಲದೆ ಪ್ರಭುತ್ವದ ವೈಫಲ್ಯದ ಪರಿಣಾಮವೂ ಆಗಿದೆ. ಅಷ್ಟು ಸಾಲದೆಂಬಂತೆ ಅವರನ್ನು ಪ್ರಮಾಣಿತ ಸಂಸ್ಥೆಯ ವಶಕ್ಕೆ ಕೊಡುವುದೆಂದರೆ ಅವರಿಗೆ ಇನ್ನಷ್ಟು ಅವಮಾನ ಮಾಡಿ ದಾರಿದ್ರ್ಯಕ್ಕೆ ತಳ್ಳುವುದರ ಮೂಲಕ ಇನ್ನಷ್ಟು ಅಮಾನವೀಯ ನಿಕೃಷ್ಟಕ್ಕೆ ಗುರಿಮಾಡಿದಂತಾಗುತ್ತದೆ.'' ಎಂಬ ಐತಿಹಾಸಿಕ ಟಿಪ್ಪಣಿಗಳನ್ನೂ ತಮ್ಮ ಆದೇಶದಲ್ಲಿ ಮಾಡಿದ್ದಾರೆ. 1990ರಲ್ಲಿ ತಮ್ಮ ಮುಂದಿದ್ದ ಒಂದು ಅಹವಾಲಿನ ವಿಚಾರಣೆ ಮಾಡುತ್ತಿದ್ದ ಬಾಂಬೆ ಹೈಕೋರ್ಟು ಇದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸಮಿತಿಗೆ ಆದೇಶಿಸಿತು. ಆ ಸಮಿತಿಯು ತನ್ನ ವರದಿಯಲ್ಲಿ ಯಾರು ಭಿಕ್ಷುಕ, ಯಾರು ರೋಗಿಗಳು, ಯಾರು ಅಂಗವಿಕಲರು ಅಥವಾ ಯಾರಿಗೆ ಆರ್ಥಿಕ ಸಹಾಯದ ಅಗತ್ಯವಿದೆಯೆಂದು ತೀರ್ಮಾನ ಮಾಡುವ ಯಾವುದೇ ಮಾನದಂಡವಿಲ್ಲವೆಂಬ ಅಂಶದ ಬಗ್ಗೆ ಗಮನ ಸೆಳೆಯಿತು. ಈ ವರದಿಗೆ ಕಾರಣವಾದ ಪ್ರಕರಣಗಳಲ್ಲಿ ಭಿಕ್ಷಾಟನೆ ಮಾಡದ ಆದರೆ ಕೊಳೆಬಟ್ಟೆ ಧರಿಸಿಕೊಂಡು ಅತ್ತಿತ್ತ ಓಡಾಡುತ್ತಿದ್ದವರನ್ನು ಬಂಧಿಸಲಾಗಿತ್ತು. ಅದರಲ್ಲೂ ವಿಶೇಷವಾಗಿ ಲಿಂಗಾಂತರಿಗಳು ಇದಕ್ಕೆ ವಿಶೇಷವಾಗಿ ಬಲಿಯಾಗುತ್ತಾರೆ.

ಈ ಕಾನೂನು ಸಮಾಜದ ಅಂಚಿನ ಸಮುದಾಯಗಳ ಮೇಲೆ ಪ್ರಭುತ್ವಕ್ಕೆ ಅಪಾರವಾದ ಮತ್ತು ಅನಿರ್ಬಂಧಿತ ಅಧಿಕಾರವನ್ನು ನೀಡುತ್ತದೆ. ಇದನ್ನು ಬಳಸಿಕೊಂಡು ಪ್ರಭುತ್ವವು ಈಗಾಗಲೇ ಅಂಚಿನಲ್ಲಿ ಬದುಕುತ್ತಿರುವ ಸಮುದಾಯಗಳ ಬಗ್ಗೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳನ್ನು ಇನ್ನಷ್ಟು ಮುಂದುವರಿಯುವಂತೆ ಮಾಡುತ್ತದೆ. ಯಾವುದನ್ನು 'ಭಿಕ್ಷಾಟನೆ' ಎಂದು ವ್ಯಾಖ್ಯಾನಿಸಲಾಗುತ್ತಿದೆಯೋ ಅದರಡಿಯಲ್ಲಿ ಹಲವು ಬಗೆಯ ನಿರ್ಲಕ್ಷ ಮತ್ತು ವಂಚನೆಗಳಿಗೆ ಗುರಿಯಾಗಿರುವ ವಿವಿಧ ಸಮುದಾಯಗಳು ಬರುತ್ತವೆ. ಆದರೆ ಆ ಸಮಿತಿಯು ಕೊಟ್ಟ ವರದಿಯು ಧೂಳು ಹಿಡಿಯುತ್ತಿದೆ. ದಿಲ್ಲಿ ಹೈಕೋರ್ಟಿನ ಇತ್ತೀಚಿನ ಆದೇಶವು ಭಿಕ್ಷಾಟನೆಗೆ ದೂಡುವ ವ್ಯಕ್ತಿಗಳನ್ನು ಶಿಕ್ಷಿಸುವ ಅಂಶಗಳನ್ನು ಕಾನೂನಿನಲ್ಲಿ ಉಳಿಸಿಕೊಂಡಿದೆ. ಭಿಕ್ಷಾಟನೆಯ ಸಮಾಜಶಾಸ್ತ್ರೀಯ ಮತ್ತು ಆರ್ಥಿಕ ಅಂಶಗಳನ್ನು ಪರಿಗಣಿಸಿದ ನಂತರ ಅದು ನಗರಾಡಳಿತವು ಬಲವಂತದ ಭಿಕ್ಷಾಟನೆಗೆ ದೂಡುತ್ತಿರುವ ಕ್ರಿಮಿನಲ್ ಗ್ಯಾಂಗ್‌ಗಳನ್ನು ಪತ್ತೆಹಚ್ಚಿ ಶಿಕ್ಷಿಸಬೇಕೆಂದು ಆದೇಶಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪೊಲೀಸರು ನಡೆಸುವ ಯಾವುದೇ ರೈಡ್‌ಗಳಲ್ಲಿ ಅಂತಹ ಕ್ರಿಮಿನಲ್‌ಗಳ್ಯಾರೂ ಬಂಧನಕ್ಕೊಳಗಾಗುವುದಿಲ್ಲ. ಒಂದೋ ಅವರು ಕಾನೂನಿನ ಬಲೆಯಿಂದ ನುಣುಚಿಕೊಳ್ಳುತ್ತಾರೆ ಅಥವಾ ಒಂದೊಮ್ಮೆ ಸಿಕ್ಕಿಹಾಕಿಕೊಂಡರೂ ಹೆಚ್ಚೆಂದರೆ ಮೂರು ವರ್ಷದ ಶಿಕ್ಷೆಗೆ ಗುರಿಯಾಗುತ್ತಾರಷ್ಟೆ.

ಅಲ್ಲದೆ ಈ ಕಾಯ್ದೆಯ ಅಂಶಗಳು ಸಂವಿಧಾನದ 19(1)(2) ಮತ್ತು 21ನೇ ಕಲಮಿನ ಆಶಯಗಳನ್ನು ಹಾಗೂ ವಿಕಲಚೇತನರ ಮತ್ತು ನಿರುದ್ಯೋಗಿಗಳ ಕಲ್ಯಾಣವನ್ನು ನಿರ್ವಹಿಸಬೇಕಾದ ಪ್ರಭುತ್ವದ ಕರ್ತವ್ಯಗಳಿಗೆ ವಿರುದ್ಧವಾಗಿರುವುದು ಸಾಬೀತಾಗಿದೆ. ದೇಶದ ರಾಜಕೀಯ ಆರ್ಥಿಕತೆಯ ಪ್ರಕ್ರಿಯೆಯ ತಾರ್ಕಿಕ ಉತ್ಪನ್ನವಾಗಿಯೇ ಸರ್ವನಾಶ ಮತ್ತು ದಾರಿದ್ರ್ಯವನ್ನೂ ಕೆಲವು ಸಮುದಾಯಗಳು ಅನುಭವಿಸಬೇಕಿದೆ. ಹೀಗಾಗಿ ತತ್‌ಕ್ಷಣದಲ್ಲಿ ಆರ್ಥಿಕತೆಯಲ್ಲಿ ಸುಧಾರಣೆ ಬರುವುದು ಕಾಣದಾಗಿರುವ ಸಂದರ್ಭದಲ್ಲಿ ಭಾರತವು ಕನಿಷ್ಠ ಪಕ್ಷ ಭಿಕ್ಷಾಟನೆಯನ್ನು ನಿರಪರಾಧೀಕರಣಗೊಳಿಸುವ ಕ್ರಮವನ್ನಂತೂ ಖಂಡಿತಾ ತೆಗೆದುಕೊಳ್ಳಬಹುದು. ದಿಲ್ಲಿ ಹೈಕೋರ್ಟು ಸಮಸ್ಯೆಯಿರುವುದನ್ನು ಒಪ್ಪಿಕೊಳ್ಳುತ್ತದೆ. ಆದರೆ ಪರಿಹಾರವೂ ಸಹ ಕಣ್ಣಿಗೆ ರಾಚುತ್ತಿದೆ.

ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News