ಬೆಂಗಳೂರು: ಪ್ರಯಾಣಿಕನ ಪರ್ಸ್ ಹಿಂದಿರುಗಿಸಿದ ಆಟೋ ಚಾಲಕ

Update: 2018-08-30 15:16 GMT

ಬೆಂಗಳೂರು, ಆ.30: ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆರೋಪಗಳ ಬೆನ್ನಿಗೆ ಪ್ರಯಾಣಿಕರೊಬ್ಬರು ತನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಪರ್ಸ್ ಹಾಗೂ ಅದರಲ್ಲಿದ್ದ ಅಮೂಲ್ಯ ದಾಖಲೆಗಳನ್ನು ಪರ್ಸ್‌ನ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಗೋರಿಪಾಳ್ಯದ ಎಸ್‌ಎಜಿ ಫರಾದ್ ಪ್ರಾಮಾಣಿಕತೆ ಮರೆದಿರುವ ಆಟೋ ಚಾಲಕ. ಇವರ ಆಟೋದಲ್ಲಿ ಪ್ರಯಾಣಿಕರೊಬ್ಬರು ಆ.29ರಂದು ಜಯನಗರ ಭಾಗದಲ್ಲಿ ಪ್ರಯಾಣ ಮಾಡಿ, ತಮ್ಮ ಪರ್ಸ್‌ನ್ನು ಮರೆತು ಆಟೋದಲ್ಲೆ ಬಿಟ್ಟು ಹೋಗಿದ್ದಾರೆ. ಸ್ವಲ್ವ ಸಮಯದ ನಂತರ ಆಟೋ ಚಾಲಕ ಪರ್ಸ್‌ನ್ನು ಗಮನಿಸಿ, ಕೂಡಲೆ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ ಪರ್ಸ್‌ನ್ನು ವಾರಸುದಾರರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಪ್ರಯಾಣಿಕ ಬಿಟ್ಟು ಹೋಗಿದ್ದ ಪರ್ಸ್‌ನಲ್ಲಿ ಎಟಿಎಂ ಕಾರ್ಡ್‌ಗಳು, ಡ್ರೈವಿಂಗ್ ಲೈಸನ್ಸ್, ಆರ್‌ಸಿ ಕಾರ್ಡ್ ಮತ್ತು 3ಸಾವಿರ ರೂ ನಗದು, ಹಾಗೂ ಇತರೆ ದಾಖಲೆಗಳು ಇದ್ದವು. ಪರ್ಸ್ ಪುನಃ ಸಿಗುತ್ತದೆ ಎಂಬ ವಿಶ್ವಾಸ ನನಗಿರಲಿಲ್ಲ. ಆದರೆ, ಆಟೋ ಚಾಲಕನ ಪ್ರಾಮಾಣಿಕತೆಯಿಂದ ನನ್ನ ಪರ್ಸ್ ಸಿಕ್ಕಿದೆ. ಈ ಪ್ರಕರಣದಿಂದಾಗಿ ಆಟೋ ಚಾಲಕರ ಮೇಲೆ ನನಗೆ ಅಭಿಮಾನ ಮೂಡಿದೆ ಎಂದು ಪ್ರಯಾಣಿಕ ಸುದೀರ್ ಅಭಿಪ್ರಾಯಿಸಿದರು.

ಘಟನೆಯ ಕುರಿತು ಆಟೋ ಚಾಲಕ ಫರಾದ್ ಮಾತನಾಡಿ, ಪ್ರಯಾಣಿಕರಿಂದ ನಮ್ಮ ಬದುಕು ನಡೆಯುತ್ತಿದೆ. ಅವರಿಗೆ ಮೋಸ ಮಾಡಿದರೆ, ದೇವರು ಒಳ್ಳೆಯದು ಮಾಡುವುದಿಲ್ಲ. ಹಲವು ವೇಳೆ ಪ್ರಯಾಣಿಕರು ಇಳಿಯುವ ಅವಸರದಲ್ಲಿ ತಮ್ಮ ವಸ್ತುಗಳನ್ನು ಮರೆತು ಬಿಡುವುದು ಸಾಮಾನ್ಯ. ಈ ವೇಳೆ ಆಟೋಚಾಲಕರು ಪ್ರಯಾಣಿಕರಿಗೆ ತಮ್ಮ ವಸ್ತುಗಳ ಕುರಿತು ನೆನೆಪಿಸುತ್ತಾರೆ. ಬುಧವಾರ ರಾತ್ರಿ ನನ್ನ ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋದ ಪರ್ಸ್‌ನ್ನು ಸರಕ್ಷಿತವಾಗಿ ಅವರ ಕೈ ಸೇರುವಂತೆ ಮಾಡಿದ್ದೇನೆ. ಈ ಕೆಲಸದಿಂದ ನನ್ನ ಮನಸ್ಸಿಗೆ ಸಮಾಧಾನ ತಂದಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News