ಸಮ್ಮಿಶ್ರ ಸರಕಾರದ ಯಶಸ್ವಿ ಆಡಳಿತಕ್ಕೆ ಉತ್ತಮ ಅಡಿಪಾಯ: ದಿನೇಶ್‌ ಗುಂಡೂರಾವ್

Update: 2018-08-30 15:32 GMT

ಬೆಂಗಳೂರು, ಆ.30: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವು ಮುಂದಿನ ಐದು ವರ್ಷಗಳ ನಡೆಸಲಿರುವ ಯಶಸ್ವಿ ಆಡಳಿತಕ್ಕೆ ಈ ನೂರು ದಿನಗಳಲ್ಲಿ ಉತ್ತಮ ಅಡಿಪಾಯ ಹಾಕಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರವು ಜನ ಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದೆ ಎಂದರು.

ರಾಜ್ಯ ಸರಕಾರ ಇನ್ನೂ ಟೇಕ್ ಆಫ್ ಆಗಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸರಕಾರ ಇಂದಲ್ಲ, ನಾಳೆ ಬಿದ್ದು ಹೋಗಲಿದೆ ಎಂದು ಕನಸು ಕಾಣುತ್ತ, ಭವಿಷ್ಯವಾಣಿ ನುಡಿಯುತ್ತಿರುವ ಬಿಜೆಪಿ ನಾಯಕರಿಗೆ ಈ ಸರಕಾರ ಯಶಸ್ವಿಯಾಗಿ ನೂರು ದಿನ ಪೂರೈಸುವುದರ ಮೂಲಕ ತಕ್ಕ ಉತ್ತರ ನೀಡಿದೆ ಎಂದು ಅವರು ಹೇಳಿದರು.

ಯಶಸ್ವಿಯಾಗಿ ಅಧಿವೇಶನ ನಡೆಸಿದ್ದೇವೆ. ಬಜೆಟ್ ಮಂಡಿಸಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳನ್ನು ಮುಂದುವರೆಸಲಾಗಿದೆ. ಜೊತೆಗೆ ಹೊಸ ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೆ ತರಲಾಗಿದೆ. ಚುನಾವಣೆ ಸಂದರ್ಭದಲ್ಲಿ ಪರಸ್ಪರ ವಿರೋಧಿಗಳಾಗಿ ಸ್ಪರ್ಧಿಸಿದ್ದ ನಾವು ಈಗ ಮೈತ್ರಿ ಮಾಡಿಕೊಂಡು ಸಮಾಧಾನಕರವಾಗಿ ಸರಕಾರ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ. ರೈತರ ಸಾಲಮನ್ನಾ, ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಉಂಟಾದ ನೆರೆ, ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರಕಾರ ವಿಶೇಷ ಕಾಳಜಿವಹಿಸಿದೆ. ಸಚಿವರು ರಾಜ್ಯಪ್ರವಾಸ ಮಾಡುತ್ತಿದ್ದು, ಆಡಳಿತಯಂತ್ರ ಚುರುಕುಗೊಂಡಿದೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

100 ದಿನಗಳಲ್ಲಿ ಸಚಿವರ ವೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಆರು ತಿಂಗಳು ನಂತರ ಕಾಂಗ್ರೆಸ್ ಪಕ್ಷದ ಸಚಿವರ ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ. ಸಮ್ಮಿಶ್ರ ಸರಕಾರದ ಸುಗಮ ಆಡಳಿತಕ್ಕಾಗಿ ಪಕ್ಷದ ವತಿಯಿಂದ ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಟೇಕಾಫ್ ಆಗಿಲ್ಲವೆಂದು ಬಿಜೆಪಿ ಮುಖಂಡರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿರುವ ಎನ್‌ಡಿಎ ಸರಕಾರ ನಾಲ್ಕೂವರೆ ವರ್ಷವಾದರೂ ಟೇಕ್ ಆಫ್ ಆಗಿಲ್ಲ. ನಮ್ಮ ಬಿಜೆಪಿಯ ಸಂಸದರು ತಮ್ಮ ಕೆಲಸವನ್ನು ಮಾಡುತ್ತಿಲ್ಲ. ರಾಜ್ಯದ ಪರವಾಗಿ ಸಮರ್ಥವಾಗಿ ಯಾವ ಹೋರಾಟವನ್ನು ಮಾಡಿಲ್ಲ ಎಂದರು. ಅಧಿಕಾರಕ್ಕಾಗಿ ಹೋರಾಡುವುದು, ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಟ್ಟು, ಹೊಸದಿಲ್ಲಿಗೆ ಹೋಗಿ ಕೊಡಗು ಜಿಲ್ಲೆಯಲ್ಲಿ ಉಂಟಾದ ನೆರೆ ಪರಿಸ್ಥಿತಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸಮಸ್ಯೆಗಳಿಗೆ ಕೇಂದ್ರದಿಂದ ಅಗತ್ಯ ನೆರವು ಒದಗಿಸುವ ಕೆಲಸವನ್ನು ಮಾಡಲಿ ಎಂದು ದಿನೇಶ್‌ ಗುಂಡೂರಾವ್ ಆಗ್ರಹಿಸಿದರು.

ಸಮನ್ವಯ ಸಮಿತಿ ಎಂಬುದು ಸಮ್ಮಿಶ್ರ ಸರಕಾರದ ಆಡಳಿತ ಸುಗಮವಾಗಿ ನಡೆಯಲು ಅಗತ್ಯ ಸಹಕಾರ ನೀಡಲು. ಇದರಲ್ಲಿ ಯಾರು ಇರಬೇಕು ಎಂಬುದು ಸಾರ್ವಜನಿಕ ಮಹತ್ವದ ವಿಚಾರವಲ್ಲ. ಅದೇನು ಸಚಿವ ಸ್ಥಾನದಷ್ಟು ಮಹತ್ವದ್ದೇನಲ್ಲ. ಸಮನ್ವಯ ಸಮಿತಿಯಲ್ಲಿ ಯಾರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ನಾಳೆ(ಆ.31) ಸಮನ್ವಯ ಸಮಿತಿ ನಡೆಯಲಿದ್ದು, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News