ಸರಕಾರಿ ಅಧಿಕಾರಿಗಳು ಲಂಚಕ್ಕಾಗಿ ನಾಗರಿಕರನ್ನು ಅಲೆದಾಡಿಸುತ್ತಿದ್ದಾರೆ: ಹೈಕೋರ್ಟ್ ಆಕ್ರೋಶ
ಬೆಂಗಳೂರು, ಆ.30: ಸರಕಾರಿ ಅಧಿಕಾರಿಗಳು ಲಂಚಕ್ಕಾಗಿ ನಾಗರಿಕರನ್ನು ಕಚೇರಿಗಳಿಗೆ ಅಲೆದಾಡಿಸುವ ಮೂಲಕ ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹೈಕೋರ್ಟ್ ಕೆಂಡ ಕಾರಿದೆ.
ತಡೆಹಿಡಿಯಲಾಗಿದ್ದ ಅರ್ಜಿದಾರರೊಬ್ಬರ ಸಂಬಳ, ಭತ್ತೆಗಳನ್ನು ನೀಡಬೇಕೆಂಬ ಆದೇಶ ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಮೂರ್ತಿ ಆರ್.ಎಸ್. ಚೌವ್ಹಾಣ್ ಹಾಗೂ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಎನ್. ರಾಜೇಂದ್ರ ಪ್ರಸಾದ್ ಪರ ವಕೀಲ ಶಿವಪ್ರಸಾದ್ ಶಾಂತನಗೌಡರ್, ಹೈಕೋರ್ಟ್ ಎಪ್ರಿಲ್ 2ರಂದು ನೀಡಿರುವ ಆದೇಶವನ್ನು ಕೆಪಿಸಿಎಲ್ ನಿರ್ದೇಶಕರು ಪಾಲನೆ ಮಾಡಿಲ್ಲ. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಣ್ಣ ಸಣ್ಣ ವಿಷಯಗಳಿಗೆಲ್ಲ ನಾಗರಿಕರು ಮತ್ತು ಸರಕಾರಿ ಉದ್ಯೋಗಿಗಳನ್ನು ಕೋರ್ಟ್‌ಗೆ ಬಂದು ನಿಲ್ಲುವಂತೆ ಮಾಡುವ ಅಧಿಕಾರಿಗಳ ಈ ಪ್ರವೃತ್ತಿ ಕ್ರಿಮಿನಲ್ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿತು. ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಮಾನವೀಯತೆಯ ಸ್ಪರ್ಶ ಇಲ್ಲದೇ ಹೋದರೆ, ವ್ಯರ್ಥ ಎಂದ ನ್ಯಾಯಮೂರ್ತಿಗಳು, ಸರಕಾರಿ ಉದ್ಯೋಗಿಗಳ ಮೇಲೆಯೂ ಮೇಲಾಧಿಕಾರಿಗಳು ಅಪರಾಧ ಎಸಗುತ್ತಿದ್ದಾರೆಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು. ಇದಕ್ಕೆ ಉತ್ತರಿಸಿದ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಾಯ್ಕ, 48 ಗಂಟೆ ಒಳಗೆ ಅರ್ಜಿದಾರರ ಮನವಿ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು. ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ಒಂದು ತಿಂಗಳೊಳಗೆ ಅರ್ಜಿದಾರರ ಮನವಿಯನ್ನು ಇತ್ಯರ್ಥಗೊಳಿಸುವಂತೆ ಆದೇಶಿಸಿತು