ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅಧಿಕಾರ ಮೊಟಕು: ಸ್ಪೀಕರ್ ರಮೇಶ್‌ಕುಮಾರ್ ಆದೇಶ

Update: 2018-08-30 15:45 GMT

ಬೆಂಗಳೂರು, ಆ.30: ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರ ‘ಅಧಿಕಾರವನ್ನು ಮೊಟಕುಗಳಿಸಿ’ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆಯ ಕಾರ್ಯದರ್ಶಿ ಸ್ಥಾನ ಅತ್ಯಂತ ಗೌರವಯುತವಾದದ್ದು, ಈ ಹುದ್ದೆಯಲ್ಲಿರುವವರು ತಮ್ಮ ನಡುವಳಿಕೆಯಿಂದ ಜನ ಸಾಮಾನ್ಯರು ವಿಧಾನಸಭೆಯ ಮೇಲಿಟ್ಟಿರುವ ವಿಶ್ವಾಸವನ್ನು ಹೆಚ್ಚಳ ಮಾಡುವಂತಿರಬೇಕು. ಆದರೆ, ಕಾರ್ಯದರ್ಶಿ ಎಸ್.ಮೂರ್ತಿಯವರು ಇತ್ತೀಚಿನ ದಿನಗಳಲ್ಲಿ ವಿವಾದಗಳಿಗೆ ಗುರಿಯಾಗುತ್ತಿದ್ದಾರೆ ಎಂದು ರಮೇಶ್‌ ಕುಮಾರ್ ಆದೇಶದಲ್ಲಿ ಹೇಳಿದ್ದಾರೆ.

ಎಸ್.ಮೂರ್ತಿಯವರ ವಿರುದ್ಧ ಹಲವು ದೂರುಗಳು ಬಂದಿವೆ. ಆದುದರಿಂದ ಕಾರ್ಯದರ್ಶಿ ಮೂರ್ತಿಯವರು ಕೇವಲ ವಿಧಾನಸಭೆ ಅಧಿವೇಶನಕ್ಕೆ ಸಂಬಂಧಿಸಿದ ಕಾರ್ಯ ಕಲಾಪಗಳು ಹಾಗೂ ಗಣ್ಯ ವ್ಯಕ್ತಿಗಳು ರಾಜ್ಯಕ್ಕೆ ಭೇಟಿ ನೀಡುವ ವೇಳೆ ಅನುಸರಿಸಬೇಕಾದ ಶಿಷ್ಟಾಚಾರಗಳ ಕೆಲಸವನ್ನು ಮಾತ್ರ ನಿರ್ವಹಿಸಬೇಕು ಎಂದು ರಮೇಶ್‌ ಕುಮಾರ್ ನಿರ್ದೇಶನ ನೀಡಿದ್ದಾರೆ.

ಕಡತ ಹಸ್ತಾಂತರ: ಎಸ್.ಮೂರ್ತಿಯವರು ತಮ್ಮ ಅಧೀನದಲ್ಲಿರುವ ಎಲ್ಲ ಕಡತಗಳನ್ನು ಸಂಬಂಧಪಟ್ಟವರಿಗೆ ಕೂಡಲೇ ಹಸ್ತಾಂತರಿಸಬೇಕು. ಸ್ಪೀಕರ್ ಕಚೇರಿಯ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲ ಕಡತಗಳನ್ನು ನೋಡಿಕೊಳ್ಳಲು ವಿಧಾನಸಭೆ ಸಚಿವಾಲಯದ ನಿರ್ದೇಶಕರಿಗೆ ರಮೇಶ್‌ ಕುಮಾರ್ ತಮ್ಮ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News