ಪಾಲಿಕೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸೂಕ್ತ ನಿರ್ವಹಣೆಯಿಲ್ಲದೆ ಸಾಯುತ್ತಿರುವ ಮರಗಳು: ಆರೋಪ
ಬೆಂಗಳೂರು, ಆ.30: ಪಾಲಿಕೆಯು ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ ಮರಗಳನ್ನು ಕಡಿಯುವ ಬದಲಿಗೆ ಸ್ಥಳಾಂತರ ಮಾಡಿ, ಬೇರೆ ಜಾಗದಲ್ಲಿ ಕಸಿ ಮಾಡಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಸಾಯುವ ಹಂತಕ್ಕೆ ತಲುಪಿವೆ ಎಂಬ ಆರೋಪ ಕೇಳಿಬಂದಿದೆ.
ನಗರವು ಶರವೇಗದಲ್ಲಿ ಬೆಳವಣಿಗೆಯಾಗುತ್ತಿದ್ದು, ಅಭಿವೃದ್ಧಿಗೆ ಪೂರಕವಾಗಿ ಬಿಬಿಎಂಪಿ ಮರಗಳನ್ನು ಕಡಿಯಲು ನಿರ್ಧರಿಸಲಾಗಿತ್ತು. ಆದರೆ, ಪರಿಸರ ಪ್ರೇಮಿಗಳು ಸೇರಿದಂತೆ ಹಲವಾರು ಮರಗಳನ್ನು ಕಡಿಯಲು ವಿರೋಧ ವ್ಯಕ್ತಪಡಿಸಿದ್ದರಿಂದ ಮರಗಳನ್ನು ಸ್ಥಳಾಂತರ ಮಾಡಲು ಪಾಲಿಕೆ ಮುಂದಾಗಿತ್ತು. ಅದರ ಭಾಗವಾಗಿ ನಗರದ ಎಂ.ಜಿ.ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆದ ಸಂದರ್ಭದಲ್ಲಿ ಅಲ್ಲಿನ ಮರಗಳನ್ನು ಕಡಿಯುವ ಬದಲಿಗೆ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಜೆಪಿ ನಗರದ ಪುಟ್ಟೇನಹಳ್ಳಿ ಕೆರೆಯಲ್ಲಿ ಕಳೆದ ವರ್ಷ ಸಾಕಷ್ಟು ಮರಗಳನ್ನು ಟ್ರಾನ್ಸ್‌ಪ್ಲಾಂಟ್ ಮಾಡಿದ್ದಾದರೂ, ಒಂದು ಮರವೂ ಜೀವಂತವಾಗಿ ಉಳಿದಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಇದೀಗ ಜಯನಗರದ ರಸ್ತೆಯನ್ನು ಆಗಲೀಕರಣ ಮಾಡುವಾಗ ಅಡ್ಡವಾಗಿದೆ ಎಂಬ ನೆಪವೊಡ್ಡಿ 30 ಕ್ಕೂ ಅಧಿಕ ಮರಗಳನ್ನು ಜೆಪಿ ನಗರದ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಮರಗಳ ಟ್ರಾನ್ಸ್ ಪ್ಲಾಂಟ್ ಮಾಡಲಾಗಿದೆ. ಆದರೆ, ಅಲ್ಲಿಯೂ ಸರಿಯಾದ ನಿರ್ವಹಣೆ ಕೊರತೆಯಿಂದಾಗಿ ಮರಗಳು ಬದುಕುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಪರಿಸರ ಪ್ರೇಮಿ ವಿಜಯ್ ದೂರಿದ್ದಾರೆ.
ಜಯನಗರ ಮೆಟ್ರೋ ನಿಲ್ದಾಣ ಬಳಿಯ ಲಕ್ಷ್ಮಣ್ ರಾವ್ ಪಾರ್ಕ್‌ನಲ್ಲಿಯೂ 171 ಮರಗಳನ್ನು ಟ್ರಾನ್ಸ್ ಪ್ಲಾಂಟ್ ಮಾಡಲಾಗಿದೆ. ಅಲ್ಲಿಯೂ ಬಹುತೇಕ ಮರಗಳು ಸಾಯುವ ಸ್ಥಿತಿಗೆ ಬಂದಿವೆ. ಜಯಮಹಲ್ ರಸ್ತೆಯನ್ನು ಆಗಲೀಕರಣ ಮಾಡುವಾಗ ಅಡ್ಡ ಬಂದ ಮರಗಳನ್ನೂ ಬೇರೆಡೆಗೆ ಟ್ರಾನ್ಸ್ ಪ್ಲಾಂಟ್ ಮಾಡಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ಸರಿಯಾಗಿ ಪೋಷಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಮರಗಳು ಜೀವ ಕಳೆದುಕೊಂಡಿವೆ. ಟ್ರಾನ್ಸ್ ಪ್ಲಾಂಟ್ ಮಾಡುವುದು ಎಂದರೆ ಮನುಷ್ಯರಿಗೆ ಆಪರೇಷನ್ ಮಾಡಿದ ರೀತಿಯಲ್ಲಿ. ಅದನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಲಿಲ್ಲ ಎಂದರೆ ಬದುಕುವುದು ಕಷ್ಟವಾಗುತ್ತದೆ. ಅಲ್ಲದೆ, ಯಾವ ಮರಗಳನ್ನು ಸ್ಥಳಾಂತರ ಮಾಡಬಹುದು ಎಂಬುದರ ಕುರಿತು ಸೂಚನೆಗಳಿರುತ್ತದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಇದ್ಯಾವುದನ್ನೂ ಪೂರ್ವಾಲೋಚನೆ ಮಾಡದೇ ಸ್ಥಳಾಂತರ ಮಾಡಲಾಗಿದೆ.
ಪಾಲಿಕೆಯ ಅಧಿಕಾರಿಗಳ ಆತುರದ ನಿರ್ಧಾರದಿಂದಾಗಿ ನಗರದಲ್ಲಿ ನೂರಾರು ಮರಗಳು ಸಾವನ್ನಪ್ಪುತ್ತಿವೆ. ಅಲ್ಲದೆ, ಲಕ್ಷಾಂತರ ರೂ.ಗಳಷ್ಟು ಬೆಲೆ ಬಾಳುವ ಹಾಗೂ ಅಪಾರವಾದ ಪರಿಸರ ಸಂಪತ್ತನ್ನು ವೃದ್ಧಿಸುವ ಮರಗಳನ್ನು ಟ್ರಾನ್ಸ್ ಪ್ಲಾಂಟ್‌ಮಾಡುತ್ತಿದ್ದಾರೆ ಎಂದು ಪರಿಸರ ಪ್ರೇಮಿಗಳು, ಪರಿಸರವಾದಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಪಾಲಿಕೆ ಮೇಯರ್ ಸಂಪತ್‌ರಾಜ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಪಾಲಿಕೆಯು ಮುಂದಿನ ದಿನಗಳಲ್ಲಿ ಟ್ರಾನ್ಸ್ ಪ್ಲಾಂಟ್ ಮಾಡುವ ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ, ನಗರದಲ್ಲಿ ಮಾಲಿನ್ಯದ ಪ್ರಮಾಣ ಜಾಸ್ತಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.