ಕಡ್ಡಾಯ ಕನ್ನಡ ಬೋಧನೆ ನಿಯಮ ಪಾಲಿಸದ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ

Update: 2018-08-30 15:52 GMT

ಬೆಂಗಳೂರು, ಆ.30: ರಾಜ್ಯದಲ್ಲಿರುವ ಖಾಸಗಿ ಶಾಲೆಗಳು ಕನ್ನಡ ಬೋಧನೆ ಕಡ್ಡಾಯ ಮಾಡಿರುವ ನಿಯಮವನ್ನು ಗಂಭೀರವಾಗಿ ಪರಿಗಣಿಸಿಲ್ಲ, ನಿಯಮವನ್ನು ಪಾಲನೆ ಮಾಡದ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಖಾಸಗಿ ಶಾಲೆಗಳ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿದ್ದು, ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರ ಬಳಿ ಆಯಾ ಶಾಲೆಗಳ ವಾಸ್ತವಿಕ ವರದಿಯನ್ನು ನೀಡಲು ಕೇಳಿದೆ ಎಂದು ತಿಳಿದುಬಂದಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಎಲ್ಲಾ ಜಿಲ್ಲೆಗಳ ವಾಸ್ತವಿಕ ವರದಿಗಳಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ಕೂಡಲೇ ಶಾಲೆಗಳನ್ನು ಪಟ್ಟಿ ಮಾಡಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡು ಖಾಸಗಿ ಶಾಲೆಗಳೂ ಕನ್ನಡವನ್ನು ಬೋಧನೆ ಮಾಡಬೇಕೆಂದು ಸೂಚಿಸಲಾಗಿದೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಮಂಡಳಿಗೂ ಈ ನಿಯಮಗಳು ಅನ್ವಯವಾಗಲಿದೆ. ಇಲಾಖೆ ಹಂತದಲ್ಲಿ ಸೂಕ್ತ ರೀತಿಯ ವ್ಯವಸ್ಥೆಗಳಿಲ್ಲ. ಶಿಕ್ಷಣ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳೂ ಪರಿಣಾಮಕಾರಿಯಾಗಿ ಕನ್ನಡ ಕಡ್ಡಾಯ ಮಾಡುವ ನಿಯಮಕ್ಕೆ ಬದ್ಧವಾಗಿಲ್ಲ. ಅಧಿಕಾರಿಗಳು ಇದೇ ರೀತಿ ವರ್ತನೆ ತೋರಿಸಿದರೆ ಅವರ ಮೇಲೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಖಾಸಗಿ ಶಾಲೆಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದು, ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಲ್ಲಿ ಸಮಸ್ಯೆಗಳು ಎದುರಾಗುತ್ತಿದೆ. ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ವೇಳೆ ಅರ್ಹತೆಯುಳ್ಳ ಶಿಕ್ಷಕರ ಅಗತ್ಯವಿದೆ. ಕನಿಷ್ಠ ಪಕ್ಷ ಶಿಕ್ಷಕರು ಡಿಪ್ಲೊಮಾ ಅಥವಾ ಬಿಎಡ್ ಆದರೂ ಮಾಡಿರಬೇಕು. ಇಂತಹ ಶಿಕ್ಷಕರು ಸಿಗುವುದು ಕಷ್ಟವಾಗಿದೆ ಎಂದು ಹೇಳಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News