ಪ್ರಾಕೃತಿಕ ವಿಕೋಪಗಳಿಗೆ ವಿಜ್ಞಾನ ತಂತ್ರಜ್ಞಾನ ಅವಶ್ಯಕ: ಚೆನ್ನೈ ಅಣ್ಣಾ ವಿ.ವಿ ಕುಲಪತಿ ಎಂ.ಕೆ.ಸೂರಪ್ಪ

Update: 2018-08-30 17:27 GMT

ಬೆಂಗಳೂರು, ಆ.30: ಪ್ರಾಕೃತಿಕ ವಿಕೋಪಗಳನ್ನು ತಡೆಯಲು ವಿಜ್ಞಾನ- ತಂತ್ರಜ್ಞಾನವು ಸೂಕ್ತ ನೆರವು ನೀಡಬೇಕು ಎಂದು ಚೆನ್ನೈ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ.ಸೂರಪ್ಪ ಹೇಳಿದರು.

ಗುರುವಾರ ನಗರದ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸತತ ಮಳೆಯಿಂದ ತತ್ತರಿಸಿ ಹೋಗಿರುವ ಕೊಡಗು ಮತ್ತು ಕೇರಳದ ಜನತೆಯನ್ನು ವಿಜ್ಞಾನ-ತಂತ್ರಜ್ಞಾನದ ಮುನ್ನೆಚ್ಚರಿಕೆ ಮೂಲಕ ಜಾಗೃತರನ್ನಾಗಿ ಮಾಡಬಹುದಿತ್ತು ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ದೇಶ ಹಿಂದುಳಿದಿದ್ದು, ನಿಫಾ, ಡೆಂಗ್, ಕಾಲರಾ, ಮಲೇರಿಯಾದಂತಹ ರೋಗಗಳಿಂದ ಜನ ಈಗಲೂ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಹೊಸ ಆವಿಷ್ಕಾರಗಳ ಮೂಲಕ ಯುವ ಪೀಳಿಗೆ ಕಂಡು ಹಿಡಿಯಬೇಕು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ಸೌರ ಇಂಧನ, ಕೃಷಿ ಉತ್ಪಾದಕತೆ ಹೆಚ್ಚಳ, ನಗರ ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಹಾಗೂ ತಂತ್ರಜ್ಞಾನ, ನ್ಯೂಕ್ಲಿಯರ್ ಅನ್ವಯದ ಅಪಾಯ, ಸೈಬರ್ ಅಪರಾಧ ಸೇರಿದಂತೆ ಅನೇಕ ಸವಾಲುಗಳು ದೇಶದ ಮುಂದಿವೆ ಎಂದರು.

ಸಂಸ್ಥೆಯೂ ಬಿ.ಇ ಸೇರಿದಂತೆ ವಿವಿಧ ವಿಭಾಗಗಳ 1,172 ಪದವಿ ವಿದ್ಯಾರ್ಥಿಗಳಿಗೆ ಹಾಗೂ ಎಂ.ಟೆಕ್ ಸೇರಿ 386 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಎಂ.ಆರ್.ಸೀತಾರಾಮ್, ಕಾರ್ಯನಿರ್ವಣಾಧಿಕಾರಿ ಬಿ.ಎಸ್.ರಾಮಪ್ರಸಾದ್ ಸೇರಿದಂತೆ ಪ್ರಮುಖರು ಉಪಸ್ಥಿರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News