ಆಘಾತಗೊಂಡ ಆಂಗ್ಲರಿಗೆ ಅಲಿ -ಕರನ್ ಆಸರೆ

Update: 2018-08-30 18:35 GMT

 ಸೌತಾಂಪ್ಟನ್, ಆ.30: ಪ್ರವಾಸಿ ಭಾರತ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನ ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

 ಮೊದಲ ಇನಿಂಗ್ಸ್‌ನಲ್ಲಿ 58 ಓವರ್‌ಗಳ ಆಟ ಕೊನೆಗೊಂಡಾಗ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟದಲ್ಲಿ 161 ರನ್ ಗಳಿಸಿದೆ.

ಆಲ್‌ರೌಂಡರ್‌ಗಳಾದ ಮೊಯಿನ್ ಅಲಿ (ಔಟಾಗದೆ 40 ರನ್) ಮತ್ತು ಸ್ಯಾಮ್ ಕರನ್ (ಔಟಾಗದೆ 35 ರನ್) ತಂಡದ ಬ್ಯಾಟಿಂಗ್‌ನ್ನು ಆಧರಿಸಿದ್ದಾರೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಜಸ್‌ಪ್ರೀತ್ ಬುಮ್ರಾ , ಹಾರ್ದಿಕ್ ಪಾಂಡ್ಯ ಮತ್ತು ಇಶಾಂತ್ ಶರ್ಮಾ ದಾಳಿಗೆ ಸಿಲುಕಿ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ದಾಂಡಿಗ ಕೀಟನ್ ಜೆನ್ನಿಂಗ್ಸ್ (0), ನಾಯಕ ಜೋ ರೂಟ್(4), ಬೈರ್‌ಸ್ಟೋವ್(6) ಮತ್ತು ಅಲಿಸ್ಟೈರ್ ಕುಕ್(17) ಔಟಾಗುವುದರೊಂದಿಗೆ ಇಂಗ್ಲೆಂಡ್ ತಂಡ 17.1 ಓವರ್‌ಗಳಲ್ಲಿ 36 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ನಾಯಕ ಜೋ ರೂಟ್‌ನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳ ಮೈಲುಗಲ್ಲನ್ನು ಮುಟ್ಟಿದ್ದಾರೆ.

  ಬೆನ್ ಸ್ಟೋಕ್ಸ್ (23) ಮತ್ತು ವಿಕೆಟ್ ಕೀಪರ್ ಬಟ್ಲರ್(21) ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ತಳವೂರಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಯತ್ನ ನಡೆಸಿದರು. ಆದರೆ ಇಬ್ಬರು ದಾಂಡಿಗರಿಗೆ ವೇಗಿ ಮುಹಮ್ಮದ್ ಶಮಿ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಅಲಿ ಮತ್ತು ಕರನ್ 7ನೇ ವಿಕೆಟ್‌ಗೆ ಜೊತೆಯಾಗಿ ತಂಡದ ಸ್ಕೋರ್‌ನ್ನು 150ರ ಗಡಿ ದಾಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News