'ಬೆಡ್‍ರೂಂ ಬಾಗಿಲನ್ನು ತೆರೆದೇ ಮಲಗುವಂತೆ ಪೊಲೀಸರು ಹೇಳಿದರು'

Update: 2018-08-31 12:36 GMT

ಹೊಸದಿಲ್ಲಿ, ಆ. 31: 'ನಮ್ಮ ಬೆಡ್‍ರೂಂ ಬಾಗಿಲನ್ನು ತೆರೆದೇ ಮಲಗುವಂತೆ ನಮಗೆ ಪೊಲೀಸರು ಹೇಳಿದರು. ನನಗೆ ಸಿಟ್ಟು ಬಂದು ಅವರಿಗೆ ಎದ್ದು ನಿಂತು ಸಾರಿ ಹೇಳುವಂತೆ ಹೇಳಿದೆ' ಎನ್ನುತ್ತಾರೆ ಹೋರಾಟಗಾರ ಗೌತಮ್ ನವ್ಲಖ ಅವರ ಸಂಗಾತಿ ಸಭಾ ಹುಸೈನ್.

ಗೌತಮ್ ಅವರನ್ನು ಗೃಹಬಂಧನದಲ್ಲಿರಿಸಲಾಗಿರುವ ರಾಜಧಾನಿಯ ನೆಹರೂ ಎನ್‍ಕ್ಲೇವ್ ನ ಅವರ ನಿವಾಸದಲ್ಲಿನ ಈಗಿನ ಸನ್ನಿವೇಶದ  ಬಗ್ಗೆ ಮಾತನಾಡಿದ ಸಭಾ ತಮ್ಮ ಹಾಗೂ ಗೌತಮ್ ಅವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆಂದು ಹೇಳಿದರು. ಇಡೀ ದಿನ ಪೊಲೀಸರಿಂದ ಸುತ್ತುವರಿಯಲ್ಪಡುವುದು ಅಸಹನೀಯ ಎಂದು ಹೇಳುವ ಅವರು ತಾವು ಮಹಿಳಾ ಕಾನ್‍ಸ್ಟೇಬಲ್ ಸಹಿತ ಮೂವರು ಪೊಲೀಸ್ ಸಿಬ್ಬಂದಿ ಮನೆಯ ಹೊರಗೆ ನಿಲ್ಲುವಂತೆ ಮಾಡುವಲ್ಲಿ ಸಫಲರಾಗಿದ್ದಾಗಿಯೂ ತಿಳಿಸಿದರು. ಇಲ್ಲದೇ ಹೋದರೆ ಮನೆಯೊಳಗಡೆ ಎಲ್ಲಿ ಹೋದರೂ ಅವರು ನಮ್ಮನ್ನು ಗಮನಿಸುತ್ತಾರೆ ಎಂದು ಸಭಾ ತಿಳಿಸಿದರು. ಗೌತಮ್ ಅವರನ್ನು ಗೃಹಬಂಧನದಲ್ಲಿರಿಸಿದಂದಿನಿಂದ ಸಭಾ ಗೌತಮ್ ಜತೆಗೆ ಇದ್ದಾರೆ.

ಅವರ ನಿವಾಸದ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಇದ್ದು ಬ್ಯಾರಿಕೇಡ್ ಗಳನ್ನೂ ಅಳವಡಿಸಲಾಗಿದೆ. ಒಳಗೇನು ನಡೆಯುತ್ತಿದೆ ಎಂದು ತಿಳಿಯದಿರಲೆಂದು ಕೆಂಪು ಬಟ್ಟೆಯನ್ನು ಮನೆಯ ಸುತ್ತ ಹಾಕಲಾಗಿದೆ. ಯಾರಿಗೂ ಒಳಕ್ಕೆ ಪ್ರವೇಶ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದರು.

ತಾವೇ ಹೊರಗೆ ಹೋಗಿ ಯಾರನ್ನಾದರೂ ಭೇಟಿಯಾಗಬೇಕಿದೆ ಎಂದು ಹೇಳುವ ಸಭಾ, ತನಗೆ ಗೌತಮ್ ಅವರನ್ನು ಒಬ್ಬರೇ ಬಿಟ್ಟು ಹೋಗಲು ಭಯವಾಗುತ್ತದೆ ಎನ್ನುತ್ತಾರೆ. ತಮ್ಮ ಫೋನಿಗೆ ಹಿತೈಷಿಗಳಿಂದ ಹಲವಾರು ಕರೆಗಳೂ ಬರುತ್ತಿವೆ ಎಂದು ಅವರು ತಿಳಿಸಿದರು. ಗೌತಮ್ ಅವರಂತೂ ಆತ್ಮವಿಶ್ವಾಸಭರಿತರಾಗಿದ್ದು ಏನೇ ಆದರೂ ಎದುರಿಸುವುದಾಗಿ ಹೇಳುತ್ತಾರೆ ಎಂದು ಸಭಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News