ಸುಗ್ರೀವಾಜ್ಞೆಗೆ ಲೇವಾದೇವಿದಾರರ ವಿರೋಧ

Update: 2018-08-31 14:15 GMT

ಬೆಂಗಳೂರು, ಆ.31: ರಾಜ್ಯ ವ್ಯಾಪ್ತಿ 25 ಸಾವಿರ ಅಧಿಕೃತ ಲೇವಾದೇವಿದಾರರು ನೀಡಿರುವ ಸಾಲದ ಮೊತ್ತವನ್ನು ರಾಜ್ಯ ಸರಕಾರ ಸಂಪೂರ್ಣ ಮನ್ನಾ ಮಾಡುವ ಸುಗ್ರೀವಾಜ್ಞೆ ಹೊರಡಿಸಿರುವುದಕ್ಕೆ ಅಖಿಲ ಕರ್ನಾಟಕ ಫೈನಾನ್ಸಿಯರ್ಸ್‌ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಶುಕ್ರವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬಿ.ಟಿ.ರಾಜಶೇಖರ್, ಸುಗ್ರೀವಾಜ್ಞೆಯನ್ನು ಸಡಿಲಿಸಿ ಲೇವಾದೇವಿಗಾರರು ನೀಡಿದ ಸಾಲಗಳನ್ನು ಮನ್ನಾ ಮಾಡದಂತೆ ಸರಕಾರ ತಿದ್ದುಪಡಿ ಮಾಡಬೇಕೆಂದು ಒತ್ತಾಯ ಮಾಡಿದರು.

ರಾಜ್ಯ ಸರಕಾರ ರೈತರ ಸಾಲ ಮನ್ನಾ ಹೆಸರಲ್ಲಿ ನಮ್ಮ ಹೊಟ್ಟೆಯ ಮೇಲೆ ಕಲ್ಲು ಹಾಕುವ ಬದಲು, ರೈತರ ಮೂಲ ಸಮಸ್ಯೆಗಳಾದ ಸಾರಿಗೆ, ಗೊಬ್ಬರ ವಿತರಣೆ, ಬೆಂಬಲ ಬೆಲೆ ಘೋಷಣೆ, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಸಮಸ್ಯೆಯಂತಹ ವಿವಿಧ ಸಮಸ್ಯೆಗಳನ್ನು ಬಗೆಹರಿಸಲಿ ಎಂದರು.

ಕೊಟ್ಟ ಅಸಲು ಹಣವನ್ನು ಸರಕಾರ ಮನ್ನಾ ಮಾಡಿದರೆ, ಅಸಲನ್ನು ಸರಕಾರವೆ ಲೇವಾದೇವಿದಾರರಿಗೆ ವಾಪಸ್ಸು ನೀಡಬೇಕು. ಅಷ್ಟೇ ಅಲ್ಲದೆ, ಬ್ಯಾಂಕು, ಸೊಸೈಟಿಗಳ ಸಾಲದಿಂದ ವಂಚಿತರಾದ ರೈತರು, ಆಪತ್ಕಾಲದಲ್ಲಿ (ಹೆರಿಗೆ, ಅಪಘಾತ ಮತ್ತು ಮಕ್ಕಳ ಶಾಲಾ ಶುಲ್ಕ) ಲೇವಾದೇವಿದಾರರಿಂದ ಸಾಲ ಕೇಳಿ, ಸಮಯಕ್ಕೆ ಸರಿಯಾಗಿ ಬಡ್ಡಿ ಮತ್ತು ಅಸಲು ವಾಪಸ್ಸು ತಿರುಗಿಸಿ ಅನ್ಯೋನ್ಯದಿಂದ ಇದ್ದಂತಹ ತಳಸಮುದಾಯದವರನ್ನು ದುರ್ಬಲಗೊಳಿಸಿ, ಬಡವರ ಹಿತಾಸಕ್ತಿ ಕಡೆಗಣಿಸಿದೆ ಎಂದು ಆರೋಪಿಸಿದರು.

ಸರಕಾರದಿಂದ ಪರವಾನಿಗೆ ಪಡೆದು ನ್ಯಾಯಬದ್ಧವಾಗಿ ಶುಲ್ಕ, ತೆರಿಗೆ ಮತ್ತು ಭದ್ರತಾ ಠೇವಣಿಗಳನ್ನು ಕಟ್ಟಿ ವ್ಯವಹಾರ ನಡೆಸುತ್ತಿದ್ದು, ರೈತಾಪಿ ಜನರಿಗೂ ಹಾಗೂ ಸಮಾಜದ ಎಲ್ಲಾ ಕ್ಷೇತ್ರದ ಜನರಿಗೂ ಸ್ನೇಹಿತನಂತೆ ಕೆಲಸ ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೆ, ಪರವಾನಿಗೆ ಪಡೆಯದೆ ಚಕ್ರಬಡ್ಡಿ ವ್ಯವಹಾರ ನಡೆಸುತ್ತಿರುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈ ವೇಳೆ ಕಾರ್ಯದರ್ಶಿ ಕೆ.ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಬಿ.ಶಿವರಾಮ್, ನಿರ್ದೇಶಕಿ ಲೀಲಾವತಿ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News