ಖಾಸಗಿ ಜಾಹೀರಾತು ಫಲಕಗಳ ತೆರವಿಗೆ ನೀಡಿದ ಗಡುವು ಅಂತ್ಯ: ಸೋಮವಾರದಿಂದ ಕಾರ್ಯಾಚರಣೆ ಆರಂಭ ಸಾಧ್ಯತೆ

Update: 2018-08-31 14:17 GMT

ಬೆಂಗಳೂರು, ಆ.31: ನಗರದ ಖಾಸಗಿ ಆಸ್ತಿಗಳಲ್ಲಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ತೆರವು ಮಾಡಲು ಬಿಬಿಎಂಪಿ ನೀಡಿದ್ದ ಗಡುವು ಶುಕ್ರವಾರಕ್ಕೆ ಅಂತ್ಯಗೊಳ್ಳಲಿದ್ದು, ಸೋಮವಾರದಿಂದ ಫಲಕಗಳ ತೆರವು ಕಾರ್ಯಾಚರಣೆ ಆರಂಭ ಮಾಡಲು ಪಾಲಿಕೆ ಸಜ್ಜಾಗಿದೆ.

ಹೈಕೋರ್ಟ್ ಸೂಚನೆ ಮೇರೆಗೆ ಈಗಾಗಲೇ ನಗರದಲ್ಲಿ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಅಳವಡಿಸಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ. ಖಾಸಗಿಯವರಿಗೆ ತೆರವು ಮಾಡಲು ಆ.31 ರವರೆಗೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ಏಜೆನ್ಸಿಗಳು ತಾವು ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವು ಮಾಡಿವೆ. ಆದರೆ, ಹೆಚ್ಚಿನ ಪ್ರದೇಶಗಳಲ್ಲಿ ತೆರವು ಮಾಡದೇ ಬಾಕಿ ಉಳಿಸಿಕೊಂಡಿವೆ. ಹೀಗಾಗಿ, ಪಾಲಿಕೆ ನೀಡಿದ ಅವಧಿಯಲ್ಲಿ ತೆರವು ಮಾಡದ ಫ್ಲೆಕ್ಸ್‌ಗಳನ್ನು ಪಾಲಿಕೆ ಸಿಬ್ಬಂದಿ ತೆರವು ಮಾಡಲಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡಗಳ ಮಾಲಕರಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ. ನಗರದಲ್ಲಿ ಎಲ್ಲೆಲ್ಲಿ ಅನಧಿಕೃತ ಫ್ಲೆಕ್ಸ್‌ಗಳಿವೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ಆ್ಯಪ್ ತಯಾರಿಸಿದ್ದು, ಎಲ್ಲೆಲ್ಲಿ ಎಷ್ಟೆಷ್ಟು ಫ್ಲೆಕ್ಸ್‌ಗಳಿವೆ ಎಂಬ ಮಾಹಿತಿ ಸಿದ್ಧವಿದ್ದು, ಸೋಮವಾರದಿಂದ ಕಾರ್ಯಾಚರಣೆ ನಡೆಸಲು ತಯಾರಿ ನಡೆಸಲಾಗುತ್ತಿದೆ.

ಪಾಲಿಕೆಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಫಲಕಗಳಿರುವುದು ಈ ಹಿಂದೆ ಪಾಲಿಕೆಯಿಂದ ನಡೆಸಲಾದ ಸಮೀಕ್ಷೆಯಿಂದ ತಿಳಿದುಬಂದಿದ್ದು, ಫಲಕಗಳ ತೆರವು ಕಾರ್ಯಾಚರಣೆ ತಲೆನೋವಾಗಿ ಪರಿಣಮಿಸಿದೆ. ಒಂದೊಂದು ಜಾಹೀರಾತು ಫಲಕ ತೆರವುಗೊಳಿಸಲು ಕ್ರೇನ್, ಕಟ್ಟರ್ ಹಾಗೂ ನಾಲ್ಕು-ಐದು ಸಿಬ್ಬಂದಿಯ ಅಗತ್ಯವಿದೆ. ಆದರೆ, ಪಾಲಿಕೆಯ ಅಗತ್ಯ ಸಿಬ್ಬಂದಿ ಹಾಗೂ ಯಂತ್ರೋಪಕರಣ ಕೊರತೆಯಿರುವ ಕಾರಣ ಫಲಕಗಳ ತೆರವಿಗೆ ಟೆಂಡರ್ ಕರೆಯಲು ಪಾಲಿಕೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಅನಧಿಕೃತ ಜಾಹೀರಾತು ಫಲಕಗಳ ತೆರವುಗೊಳಿಸಲು ಪಾಲಿಕೆಯಿಂದ 20 ದಿನಗಳು ಅವಕಾಶ ನೀಡಲಾಗಿತ್ತು. ಅಲ್ಲದೆ, ಫಲಕಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಈವರೆಗೆ ಯಾರು ದಾಖಲೆಗಳ ಸಲ್ಲಿಕೆಗೆ ಮುಂದಾಗಿಲ್ಲ. ಹೀಗಾಗಿ ಅನಧಿಕೃತ ಜಾಹೀರಾತು ಫಲಕವಿರುವ ಆಸ್ತಿ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News