ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಮಾದರಿ: ಸಚಿವ ಝಮೀರ್‌ ಅಹ್ಮದ್

Update: 2018-08-31 14:27 GMT

ಬೆಂಗಳೂರು, ಆ.31: ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಆವರಣದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಮಾದರಿಯಲ್ಲಿ ರಾಜ್ಯದ ಇತರ ವಕ್ಫ್ ಆಸ್ತಿಗಳನ್ನು ಅಭಿವೃದ್ಧಿಪಡಿಸಿದರೆ, ಸರಕಾರದಿಂದ ನಮಗೆ ಯಾವುದೇ ನೆರವಿನ ಅಗತ್ಯವಿರುವುದಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್‌ ಖಾನ್ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮಿದ್ ಷಾ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2005ರಲ್ಲಿ ನಡೆದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ನಾನು ಹಮೀದ್ ಷಾ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದ್ದೆ ಎಂದರು. ಇಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಈ ಹಿಂದೆ ಹಮೀದ್ ಷಾ ಕಾಂಪ್ಲೆಕ್ಸ್ ಆವರಣಕ್ಕೂ ಈಗಿನ ಪರಿಸ್ಥಿತಿಗೂ ಅಜಗಜಾಂತರವಿದೆ. ಜಿ.ಎ.ಬಾವಾ ಮಾದರಿಯಲ್ಲಿ ಪ್ರತಿಯೊಬ್ಬ ವಕ್ಫ್ ಸಂಸ್ಥೆಯ ಮುಖ್ಯಸ್ಥರು ಆಲೋಚನೆ ಮಾಡಿದರೆ, ಸರಕಾರದಿಂದ ಅನುದಾನ ಪಡೆಯುವ ಬದಲು, ನಾವೇ ಸರಕಾರಕ್ಕೆ ಹಣ ನೀಡಬಹುದು ಎಂದು ಅವರು ಹೇಳಿದರು.

1976ರಲ್ಲಿ ಹಮೀದ್ ಷಾ ಕಾಂಪ್ಲೆಕ್ಸ್ ನಿರ್ಮಾಣವಾಯಿತು. 2014ರಲ್ಲಿ ಜಿ.ಎ.ಬಾವಾ ಈ ಕಾಂಪ್ಲೆಕ್ಸ್‌ನ ಆಡಳಿತ ಸಮಿತಿಯ ಅಧಿಕಾರ ವಹಿಸಿಕೊಂಡ ಬಳಿಕ 8 ಲಕ್ಷ ರೂ. ಸಂಗ್ರಹವಾಗುತ್ತಿದ್ದ ಬಾಡಿಗೆಯು 24 ಲಕ್ಷ ರೂ.ಗಳಿಗೆ ಹೆಚ್ಚಳವಾಗಿದೆ. ಆಡಳಿತ ಸಮಿತಿಯ ಖಾತೆಯಲ್ಲಿ ಮೂರುವರೆಯಿಂದ ನಾಲ್ಕು ಕೋಟಿ ರೂ.ಜಮೆಯಾಗಿದೆ ಎಂದು ಅವರು ತಿಳಿಸಿದರು. ಕಾಂಪ್ಲೆಕ್ಸ್ ಆವರಣದಲ್ಲಿ ಐದು ಯಂತ್ರಗಳನ್ನು ಒಳಗೊಂಡ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಯಂತೆ ಇನ್ನು ಆರು ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಅದರ ಎದುರುಗಡೆ ಐದು ಅಂತಸ್ತಿನ ಐಟಿಐ ಬ್ಲಾಕ್ ನಿರ್ಮಾಣವಾಗಿದೆ. ಅಲ್ಲದೆ, ಮಸೀದಿಯ ಇಮಾಮ್ ಹಾಗೂ ಮುಅಝ್ಝಿನ್‌ಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿ.ಎ.ಬಾವಾ ಕಾರ್ಯವೈಖರಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಿರುವ ವಾಹನ ನಿಲುಗಡೆ ಪ್ರದೇಶದಲ್ಲೂ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶವನ್ನು ಸಮಿತಿ ಹೊಂದಿದೆ. ಹಮೀದ್ ಷಾ ಕಾಂಪ್ಲೆಕ್ಸ್ ಆಡಳಿತ ಸಮಿತಿಯು ಕೈಗೊಳ್ಳುವಂತಹ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಸಚಿವನಾಗಿ ಸಂಪೂರ್ಣ ಸಹಕಾರ ನೀಡುತ್ತೇನೆ. ಸೆ.4 ಅಥವಾ 5ರಂದು ರಾಜ್ಯದ ಎಲ್ಲ ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರ ಪರಿಶೀಲನಾ ಸಭೆಯನ್ನು ಕರೆಯಲಾಗುವುದು ಎಂದು ಅವರು ಹೇಳಿದರು.

ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ವಕ್ಫ್ ಬೋರ್ಡ್‌ನಲ್ಲಿ ಇರಿಸಲಾಗಿದ್ದ 35 ಕೋಟಿ ರೂ.ಗಳ ಅನುದಾನ ಸಂಪೂರ್ಣ ಖರ್ಚಾಗಿದೆ. ಹೆಚ್ಚುವರಿಯಾಗಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಸಾಧ್ಯವಾದರೆ ಸೋಮವಾರ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅನುದಾನ ಬಿಡುಗಡೆಗೆ ಕೋರುತ್ತೇನೆ ಎಂದು ಝಮೀರ್‌ ಅಹ್ಮದ್ ತಿಳಿಸಿದರು.

ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಆಡಳಿತ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ ಮಾತನಾಡಿ, ನಮ್ಮ ಆಹ್ವಾನವನ್ನು ಒಪ್ಪಿ ಸಚಿವರು ಇಲ್ಲಿಗೆ ಭೇಟಿ ನೀಡಿರುವುದು ಸಂತೋಷ ತಂದಿದೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಝಮೀರ್‌ಅಹ್ಮದ್ ಅವರ ಕಾರ್ಯವೈಖರಿ ನನಗೆ ಅಚ್ಚುಮೆಚ್ಚು. ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ನಮ್ಮ ಸಮುದಾಯದ ಕಲ್ಯಾಣಕ್ಕೆ ಸದಾ ಕ್ರಿಯಾಶೀಲರಾಗಿರುತ್ತಾರೆ. ನಮ್ಮ ಸಮುದಾಯವು ಅವರೊಂದಿಗೆ ಸದಾ ಇರಲಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಉರ್ದು ಅಕಾಡಮಿಯ ಅಧ್ಯಕ್ಷ ಮುಬೀನ್ ಮುನವ್ವರ್, ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಸೈಯದ್ ಮುಜಾಹಿದ್, ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಆಡಳಿತ ಸಮಿತಿಯ ಸದಸ್ಯರು, ಮುಖಂಡ ಶಕೀಲ್ ನವಾಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News