"ಮಾನವ ಹಕ್ಕು ಹೋರಾಟಗಾರರ ಬಂಧನ ದಲಿತ, ಬುಡಕಟ್ಟು ಸಮುದಾಯದ ಮೇಲಿನ ನೇರ ದಾಳಿ"

Update: 2018-08-31 14:52 GMT

ಬೆಂಗಳೂರು, ಆ.31: ಕೇಂದ್ರ ಸರಕಾರ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸುವ ಮೂಲಕ ದಲಿತ ಹಾಗೂ ಬುಡಕಟ್ಟು ಸಮುದಾಯದ ಮೇಲೆ ನೇರ ದಾಳಿ ನಡೆಸಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದರು.

ನಗರದಲ್ಲಿ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ನಗರದಲ್ಲಿ ಆಯೋಜಿಸಿದ್ದ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಈಗ ಬಂಧನಕ್ಕೆ ಒಳಗಾಗಿರುವ ಮಾನವ ಹಕ್ಕು ಹೋರಾಟಗಾರರು ದಲಿತ ಹಾಗೂ ಬುಡಕಟ್ಟು ಸಮುದಾಯದ ಏಳ್ಗೆಗಾಗಿ ಶ್ರಮಿಸುತ್ತಿದ್ದವರು. ಹೀಗಾಗಿ ದಲಿತ ಪರ ಹೋರಾಟಗಾರರಿಗೆ ಎಚ್ಚರಿಕೆಯಾಗಿ ಬಂಧನ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ಕೋರೆಂಗಾವ್ ದಲಿತ ಸಮುದಾಯದ ಅಸ್ಮಿತೆಯ ಪ್ರಶ್ನೆಯಾಗಿದೆ. ಹೀಗಾಗಿ ಕಳೆದ ಜನವರಿಯಲ್ಲಿ ಕೋರೆಂಗಾವ್ ಸಮಾವೇಶದ ವೇಳೆ ಕೋಮುವಾದಿಗಳು ಗಲಭೆ ಸೃಷ್ಟಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ದಲಿತ ಸಂಘಟನೆಗಳು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಅನ್ಯಾಯದ ವಿರುದ್ಧ ದಲಿತರು ಪ್ರತಿಭಟಿಸುವುದು ಹಾಗೂ ಅದನ್ನು ಬೆಂಬಲಿಸುವುದೇ ಕೇಂದ್ರ ಸರಕಾರಕ್ಕೆ ದೊಡ್ಡ ಪ್ರಮಾದವಾಗಿದೆ. ಹೀಗಾಗಿ ಕೇಂದ್ರ ಸರಕಾರ ನೇರವಾಗಿ ದಲಿತರ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ನಡೆಯುತ್ತಿರುವ ದಲಿತ ಹಾಗೂ ಬುಡಕಟ್ಟು ಸಮುದಾಯದ ಮೇಲೆ ದಾಳಿ ಹಾಗೂ ಮಾನವ ಹಕ್ಕು ಹೋರಾಟಗಾರರಿಗೆ ಬೆದರಿಕೆ ಹಾಕುತ್ತಿರುವುದರ ಹಿಂದೆ ಕಾರ್ಪೊರೇಟ್ ಶಕ್ತಿಗಳ ಹುನ್ನಾರವಿದೆ. ಬುಡಕಟ್ಟು ಸಮುದಾಯ ವಾಸಿಸುತ್ತಿರುವ ಅರಣ್ಯ ಪ್ರದೇಶವನ್ನು ವಶಪಡಿಸಿಕೊಂಡು, ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವುದಕ್ಕಾಗಿ ಕೇಂದ್ರ ಸರಕಾರವನ್ನು ಇಂತಹ ಕೃತ್ಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ ಮಾತನಾಡಿ, ಬಂಧನಕ್ಕೆ ಒಳಗಾಗಿರುವ ಮಾನವ ಹಕ್ಕು ಹೋರಾಟಗಾರರು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುವುದು ಕಪೋಕಲ್ಪಿತವಾಗಿದೆ. ಕೇಂದ್ರ ಸರಕಾರ ಪೊಲೀಸರ ಮೂಲಕ ಮಾನವ ಹಕ್ಕು ಹೋರಾಟಗಾರರು ಹಾಗೂ ಪ್ರಗತಿಪರರ ಧ್ವನಿಯನ್ನು ಬಂದ್ ಮಾಡಲು ಯೋಜನೆ ರೂಪಿಸಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News