ಸೆಪ್ಟಂಬರ್ 3ನೆ ವಾರದಲ್ಲಿ ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ನಿರ್ಧಾರ

Update: 2018-08-31 15:40 GMT

ಬೆಂಗಳೂರು, ಆ. 31: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಯನ್ನು ಸೆಪ್ಟಂಬರ್ ಮೂರನೆ ವಾರದಲ್ಲಿ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶುಕ್ರವಾರ ಇಲ್ಲಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಪಾಲ್ಗೊಂಡಿದ್ದರು.

ಅನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸೆಪ್ಟಂಬರ್ ಮೂರನೆ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಕಾಂಗ್ರೆಸ್‌ನಿಂದ 6, ಜೆಡಿಎಸ್ 1, ಒಟ್ಟು 7 ಮಂದಿಯನ್ನು ಮಂತ್ರಿಮಂಡಲಕ್ಕೆ ನೂತನವಾಗಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. ಇದೇ ವೇಳೆ ನಿಗಮ ಮಂಡಳಿಗೆ ಕಾಂಗ್ರೆಸ್‌ನ 20 ಶಾಸಕರು, ಜೆಡಿಎಸ್‌ನ 10 ಮಂದಿ, ಒಟ್ಟು 30 ಮಂದಿಯನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಹಾಗೂ ವಿಧಾನ ಪರಿಷತ್ತಿನ ತೆರವಾಗಿರುವ 6 ಸ್ಥಾನಗಳು- ಮೂರು ನಾಮನಿರ್ದೇಶನ, ಮೂರು ಚುನಾವಣೆ- ತುಂಬುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.

ಐದು ವರ್ಷ ಸ್ಥಿರ ಸರಕಾರ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಐದು ವರ್ಷ ಸ್ಥಿರವಾಗಿರಲಿದೆ. ಮೈತ್ರಿ ಸರಕಾರ ಉತ್ತಮ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಶೀಘ್ರದಲ್ಲೆ ಮೈತ್ರಿ ಸರಕಾರ ಸಾಮಾನ್ಯ ಕನಿಷ್ಟ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೈಪಿಡಿ ಸಿದ್ದಪಡಿಸಲಾಗುವುದು ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಧಿಕಾರಿಗಳು ಮತ್ತು ನೌಕರರ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ಸೆ.5ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಬರುವ ನಿರೀಕ್ಷೆ ಇದೆ. ಅದನ್ನು ನೋಡಿಕೊಂಡು ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸೌಹಾರ್ದದ ಹೋರಾಟ: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೌಹಾರ್ದ ಹೋರಾಟ ನಡೆಸಿದೆ. ಸ್ಥಳೀಯ ಸಂಸ್ಥೆಯಲ್ಲಿಯೂ ಮೈತ್ರಿ ಮುಂದುವರಿಯಲಿದ್ದು, ಅತಂತ್ರ ಪರಿಸ್ಥಿತಿ ಇರುವ ಕಡೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಣೆ ನೀಡಿದರು.

ಉತ್ತರ ಅಸಾಧ್ಯ: ಹಾಸನದಲ್ಲಿ ತಾನು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಊಹಾಪೋಹಾದ ಸುದ್ದಿಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಊಹಾ ಪತ್ರಿಕೋದ್ಯಮ ಜಾಸ್ತಿಯಾಗಿದೆ. ಈ ಸಂಬಂಧದ ಎಲ್ಲ ಸುದ್ದಿಗಳು ಆಧಾರ ರಹಿತ ಮತ್ತು ಸತ್ಯಕ್ಕೆ ದೂರ ಎಂದು ಸಿದ್ದರಾಮಯ್ಯ ಹೇಳಿದರು.

‘5 ವರ್ಷಗಳ ನಂತರ ಜನತೆ ನನಗೆ ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮಾಧ್ಯಮಗಳಲ್ಲಿ ಪ್ರತಿನಿತ್ಯ ಅದೇ ವಿಚಾರವನ್ನು ಪದೇ ಪದೇ ಕೇಳಿದರೆ ಉತ್ತರ ನೀಡಲು ಆಗುವುದಿಲ್ಲ ಎಂದು ನಿರಾಕರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News