ಸನಾತನ ಸಂಸ್ಥೆಯ ದುಷ್ಕೃತ್ಯ ಮರೆಮಾಚಲು ಮಾನವ ಹಕ್ಕು ಹೋರಾಟಗಾರರ ಬಂಧನ: ಡಾ.ಜಿ.ರಾಮಕೃಷ್ಣ

Update: 2018-08-31 15:54 GMT

ಬೆಂಗಳೂರು, ಆ.31: ದೇಶದದಲ್ಲಿ ಸನಾತನ ಸಂಸ್ಥೆ ನಡೆಸುತ್ತಿರುವ ಹತ್ಯೆ ಪ್ರಕರಣದ ಗಮನವನ್ನು ಜನತೆಯಿಂದ ಮರೆಮಾಚುವುದಕ್ಕಾಗಿ ಕೇಂದ್ರ ಸರಕಾರ ಮಾನವ ಹಕ್ಕು ಹೋರಾಟಗಾರರ ಬಂಧನ ಪ್ರಕ್ರಿಯೆ ಮುಂದುವರೆಸಿದೆ ಎಂದು ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು.

ಮಾನವ ಹಕ್ಕುಗಳ ಪರ ಹೋರಾಟಗಾರರಾದ ವೆರ್ನನ್ ಗೋನ್ಸಾಲ್ವಿಸ್, ಅರುಣ್ ಫೆರೇರಾ, ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್ ಹಾಗೂ ವರವರ ರಾವ್ ಅವರ ಅಕ್ರಮ ಬಂಧನವನ್ನು ವಿರೋಧಿಸಿ ನಗರದ ಅಲ್ಯುಮ್ನಿ ಹಾಲ್‌ನಲ್ಲಿ ಆಯೋಜಿಸಿದ್ದ ಖಂಡನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಗತಿಪರ ಚಿಂತಕ ದಾಭೋಲ್ಕರ್, ಪನ್ಸಾರೆ, ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ನೇರ ಪಾತ್ರವಿರುವುದು ಸಾಬೀತಾಗಿದೆ. ಈ ವಿಷಯವನ್ನು ಜನತೆಯಿಂದ ಮರೆಮಾಚಲು ಪ್ರಗತಿಪರ ಹಾಗೂ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಅಭಿಪ್ರಾಯಿಸಿದರು.

ಕೇಂದ್ರ ಸರಕಾರ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ನೋಟು ನಿಷೇಧ, ಜಿಎಸ್ಟಿ ಜಾರಿ, ಪೆಟ್ರೋಲಿಯಂ ದರ ಹೆಚ್ಚಳ ಮಾಡಿರುವುದರ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುವುದು ಬಿಜೆಪಿಗೆ ಕಷ್ಟ ಸಾಧ್ಯವಾಗಿದೆ. ಹೀಗಾಗಿ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಬಗ್ಗೆ ಸಾರ್ವಜನಿಕರ ಮಧ್ಯೆ ಚರ್ಚೆಯಾಗದಂತೆ ತಡೆಯಲು, ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಕೇಂದ್ರ ಸರಕಾರ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸುವ ಮೂಲಕ ಪ್ರಜಾತಂತ್ರ ಮೌಲ್ಯಗಳನ್ನು ನಾಶ ಮಾಡಲು ಹೊರಟಿದೆ. ಬಿಜೆಪಿಗೆ ಸಂವಿಧಾನ ಹಾಗೂ ಭಾರತೀಯ ಪರಂಪರೆಯ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ ಅಭಿವ್ಯಕ್ತಿ ಸ್ವಾತಂತ್ರದ ಪ್ರತಿಪಾದಕರಾದ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸುತ್ತಿರಲಿಲ್ಲವೆಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಪ್ರೊ.ರಾಧಾಕೃಷ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದ ರೋಗಗ್ರಸ್ಥ ಮನಸ್ಥಿತಿವುಳ್ಳವರ ಪ್ರತಿನಿಧಿಗಳಾಗಿದ್ದು, ಸಂವಿಧಾನವನ್ನು ಬದಲಾಯಿಸುವ ಮಾರ್ಗದಲ್ಲಿ ಹೊರಟಿರುವ ಬಿಜೆಪಿಗೆ ಮಾನವ ಹಕ್ಕು ಹೋರಾಟಗಾರರ ಬಂಧನವು ಒಂದು ಭಾಗವಾಗಿದೆ ಎಂದು ಆರೋಪಿಸಿದರು.

ಈ ವೇಳೆ ಮಾಜಿ ಶಾಸಕ ಎ.ಕೆ.ಸುಬ್ಬಯ್ಯ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತೆ ವಿಜಯಮ್ಮ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ಡಾ.ಎನ್.ಗಾಯತ್ರಿ, ಸಿಪಿಎಂ ಮುಖಂಡ ಕೆ.ಪ್ರಕಾಶ್, ಮಾನವ ಹಕ್ಕು ಹೋರಾಟಗಾರ ಶಿವಸುಂದರ್, ನಗರಗೆರೆ ರಮೇಶ್, ಮಲ್ಲೇಶ್, ಶ್ರೀಪಾದ್‌ಭಟ್, ವಕೀಲ ಅನಂತ್‌ನಾಯಕ್ ಮತ್ತಿತರರಿದ್ದರು.

ಮುಂದಿನ ಲೋಕಸಭಾ ಚುನವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಭಾರತದ ಬಹುಸಂಸ್ಕೃತಿ, ಭಿನ್ನ ಧ್ವನಿಗಳು ಸಂಪೂರ್ಣವಾಗಿ ಬಂದ್ ಆಗಲಿದೆ. ಕನಿಷ್ಠ ಮಟ್ಟದ ಅಭಿವ್ಯಕ್ತಿ ಸ್ವಾತಂತ್ರಕ್ಕೂ ಅವಕಾಶವಿರುವುದಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳು, ಪ್ರಗತಿಪರ ಸಂಘಟನೆಗಳು ಹಾಗೂ ದೇಶದ ಸಂವಿಧಾನದ ಮೇಲೆ ಗೌರವವಿರುವ ಪ್ರತಿಯೊಬ್ಬರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾಗಿರಬೇಕು.

-ಎ.ಕೆ.ಸುಬ್ಬಯ್ಯ ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News