ಪರವಾನಿಗೆ ಪಡೆಯದೆ ಕಲ್ಲುಗಣಿಗಾರಿಕೆ: ಜಮೀನು ಮಾಲಕರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು, ಆ.31: ರಾಜ್ಯದ ವಿವಿಧ ಜಿಲ್ಲೆಗಳ ಪಟ್ಟ ಜಮೀನಿನಲ್ಲಿ ಸೂಕ್ತ ಪರವಾನಗಿ ಪಡೆಯದೇ ಕಲ್ಲುಗಣಿಗಾರಿಕೆ ನಡೆಸಿದ ಮತ್ತು ಸರಕಾರಕ್ಕೆ ರಾಜಧನ ಪಾವತಿಸದ ಪ್ರಕರಣ ಸಂಬಂಧ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ಜಮೀನು ಮಾಲಕರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಲೋಕಾಯುಕ್ತ ಎಸ್‌ಐಟಿ ದಾಖಲಿಸಿದ್ದ ಎಫ್‌ಐಆರ್ ಮತ್ತದರ ತನಿಖೆ ರದ್ದುಪಡಿಸುವಂತೆ ಕೋರಿ ಬೆಂಗಳೂರು, ಹಾಸನ, ಕೊಪ್ಪಳ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಪಟ್ಟ ಜಮೀನಿನನ್ನು ಕಲ್ಲುಗಣಿಗಾರಿಕೆಗಾಗಿ ಗುತ್ತಿಗೆ ನೀಡಿದ್ದ ಮತ್ತು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಅನೇಕ ಭೂ ಮಾಲಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ, ಅರ್ಜಿಗಳನ್ನು ವಜಾಗೊಳಿಸಿ ಶುಕ್ರವಾರ ತೀರ್ಪು ಪ್ರಕಟಿಸಿದರು.
ಎಸ್‌ಐಟಿಗೆ ಅಧಿಕಾರವಿದೆ: ಪ್ರಕರಣದ ತನಿಖೆ ನಡೆಸುವ ಅಧಿಕಾರವನ್ನು ಎಸ್‌ಐಟಿ ಹೊಂದಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುವುದರಿಂದ ಅರ್ಜಿದಾರರಿಗೆ ಕೆಡಕು ಉಂಟಾಗುವುದಿಲ್ಲ. ಎಫ್‌ಐಆರ್ ರದ್ದುಪಡಿಸುವ ಕುರಿತಂತೆ ಬಲವಾದ ಕಾರಣಗಳನ್ನು ಅರ್ಜಿದಾರರು ಮನವರಿಕೆ ಮಾಡಿಕೊಟ್ಟಿಲ್ಲ. ಅರ್ಜಿದಾರರ ವಿರುದ್ಧದ ಎಫ್‌ಐಆರ್ ಹಾಗೂ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಸೂಕ್ತ ಸಕಾರಣಗಳು ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಎಲ್ಲ ಅರ್ಜಿಗಳನ್ನು ವಜಾಗೊಳಿಸಿತು.
ಅಲ್ಲದೆ, ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಎಸ್‌ಐಟಿಗೆ ಯಾವುದೇ ಅಧಿಕಾರ ಇಲ್ಲ ಎಂಬ ಅರ್ಜಿದಾರರ ವಾದ ತಿರಸ್ಕರಿಸಿರುವ ನ್ಯಾಯಪೀಠ, ಎಫ್‌ಐಆರ್‌ಗಳಿಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ಆ ಮೂಲಕ ತನಿಖೆ ಮುಂದುವರಿಸಲು ಹಸಿರು ನಿಶಾನೆ ತೋರಿದೆ.
ಲೋಕಾಯುಕ್ತ ಪರ ವಿಶೇಷ ಅಭಿಯೋಜಕ ಪಿ.ಗೋವಿಂದನ್ ವಾದಿಸಿ, ಪ್ರಕರಣ ಸಂಬಂಧ ತನಿಖೆ ನಡೆಸಲು ಲೋಕಾಯುಕ್ತ ಎಸ್‌ಐಟಿಗೆ ಸಂಪೂರ್ಣ ಅಧಿಕಾರವಿದೆ. ತನಿಖೆಯನ್ನು ಪ್ರಾಥಮಿಕ ಹಂತದಲ್ಲೇ ರದ್ದುಪಡಿಸಿದರೆ ಸತ್ಯಾಂಶವು ಹೊರ ಬರುವುದಿಲ್ಲ. ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಸಿದ ನಂತರ ಅರ್ಜಿದಾರರು ತಮಗೆ ಅನ್ಯಾಯವಾಗಿದ್ದಲ್ಲಿ ಕೋರ್ಟ್‌ಗೆ ಮೊರೆ ಹೋಗಬಹುದು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಕರಣವನ್ನು ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿದೆ. ಹೀಗಾಗಿ, ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದ್ದರು. ಈ ವಾದ ಪುರಸ್ಕರಿಸಿದ ಹೈಕೋರ್ಟ್ ಈ ಆದೇಶ ಮಾಡಿದೆ.
ಪ್ರಕರಣವೇನು: ಕೊಪ್ಪಳ, ಹಾಸನ, ಧಾರವಾಡ-ಹುಬ್ಬಳ್ಳಿ ಮತ್ತು ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳ ಪಟ್ಟ ಜಮೀನನ್ನು, ಭೂ ಮಾಲಕರು ಕಲ್ಲು ಗಣಿಗಾರಿಕೆ ನಡೆಸಲು ಹಲವು ಕಂಪೆನಿಗಳಿಗೆ ಗುತ್ತಿಗೆ ನೀಡಿದ್ದರು. ಕೆಲ ಪ್ರಕರಣಗಳಲ್ಲಿ ಭೂ ಮಾಲಕರೆ ತಮ್ಮ ಜಮೀನನಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಆದರೆ, ಅದಕ್ಕಾಗಿ ರಾಜ್ಯ ಸರಕಾರದಿಂದ ಕಾರ್ಯಾದೇಶ ಪಡೆದುಕೊಂಡಿರಲಿಲ್ಲ. ಹೊರ ತೆಗೆದ ಮಾರಾಟ ಮಾಡಿದ ಕಲ್ಲಿಗೆ ಸರಕಾರಕ್ಕೆ ರಾಜಧನ ಪಾವತಿರಲಿಲ್ಲ. ಇದರಿಂದ ಲೋಕಾಯುಕ್ತ ಸಂಸ್ಥೆ 2014ರಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು.
ತದನಂತರ ರಾಜ್ಯ ಸರಕಾರವು ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಎಸ್‌ಐಟಿಗೆ ವರ್ಗಾಯಿಸಿತ್ತು. ಇದರಿಂದ ಎಸ್‌ಐಟಿಯು ಭೂ ಮಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಶುರು ಮಾಡಿತ್ತು. ಇದನ್ನು ಪ್ರಶ್ನಿಸಿ ಭೂ ಮಾಲಕರು ಹೈಕೋರ್ಟ್‌ಗೆ 2016, 17 ಮತ್ತು 18ನೆ ಸಾಲಿನಲ್ಲಿ ಹೈಕೋರ್ಟ್ ಹಲವು ಕ್ರಿಮಿನಲ್ ಹಾಗೂ ತಕರಾರು ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ಎಸ್‌ಐಟಿಗೆ ಸರಕಾರಿ ಅಧಿಕಾರಿಗಳ ಮೇಲೆ ಮಾತ್ರ ತನಿಖೆ ನಡೆಸಲು ಅಧಿಕಾರವಿದೆ. ಆದರೆ, ಖಾಸಗಿ ವ್ಯಕ್ತಿಗಳ ಮೇಲೆ ತನಿಖೆ ನಡೆಸುವ ಅಧಿಕಾರವಿಲ್ಲ. ಹೀಗಾಗಿ, ತಮ್ಮ ವಿರುದ್ಧದ ಎಸ್‌ಐಟಿ ದಾಖಲಿಸಿದ ಎಫ್‌ಐಆರ್ ಹಾಗೂ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿದ್ದರು.