ನಿರ್ದೇಶಕ ಎಸ್.ನಾರಾಯಣ್‌ಗೆ ವಂಚಿಸಿದ್ದ ಇಬ್ಬರ ಬಂಧನ: ಪ್ರಮುಖ ಆರೋಪಿಗಾಗಿ ಶೋಧ
ಬೆಂಗಳೂರು, ಆ.31: ಲೋನ್ ಮಾಡಿಸಿಕೊಡುವುದಾಗಿ ಸ್ಯಾಂಡಲ್‌ವುಡ್ ನಿರ್ದೇಶಕ ಎಸ್. ನಾರಾಯಣ್ ಅವರನ್ನು ನಂಬಿಸಿ 43 ಲಕ್ಷ ರೂ. ದೋಖಾ ಮಾಡಿದ್ದ ಮಂದಾರಮೂರ್ತಿಯ ಇಬ್ಬರು ಸಹಚರರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಶಾಂತಕೃಷ್ಣ ಹಾಗೂ ವಿಜಯ್‌ಕುಮಾರ್ ಎಂಬುವವರನ್ನು ಬಂಧಿಸಿದ ಪೊಲೀಸರು ಅವರಿಂದ ಕಾರ್‌ವೊಂದನ್ನು ಕೂಡಾ ಸೀಜ್ ಮಾಡಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ಮಂದಾರಮೂರ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಪೊಲೀಸರು ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಎಸ್. ನಾರಾಯಣ್ 2016ರಲ್ಲಿ ಕೆಲವೊಂದು ಸಿನಿಮಾ ಪ್ರಾಜೆಕ್ಟ್‌ಗೆ ಹಣದ ಅವಶ್ಯಕತೆ ಇದ್ದರಿಂದ 50 ಕೋಟಿ ರೂ. ಸಾಲಕ್ಕೆಂದು ಅಲೆದಾಡುತ್ತಿದ್ದೆ. ಈ ವೇಳೆ ವ್ಯಕ್ತಿಯೊಬ್ಬ ಪರಿಚಯವಾಗಿ ಬೇರೆಡೆ ಲೋನ್ ಮಾಡಿಸುವುದಾಗಿ ನಂಬಿಸಿದ್ದ.
ತಮಿಳುನಾಡಿಗೆ ನನ್ನನ್ನು ಕರೆದೊಯ್ದು ಮಂದಾರಮೂರ್ತಿ ಎಂಬುವವರಿಗೆ ನನ್ನನ್ನು ಆತ ಪರಿಚಯಿಸಿದ್ದ. ಅವರು 50 ಕೋಟಿ ರೂ. ಮೌಲ್ಯದ ಡಿಡಿಯನ್ನು ನನ್ನ ಹೆಸರಿಗೆ ನೀಡಿದರು. ನಂತರ 43 ಲಕ್ಷ ರೂ. ಹಣವನ್ನು ಕಮಿಷನ್ ಪಡೆದಿದ್ದರು. ಆದರೆ ಎಷ್ಟು ದಿನ ಕಳೆದರೂ ಬ್ಯಾಂಕಿನಿಂದ ಹಣ ಸಿಗಲಿಲ್ಲ. ಅವರು ಕೊಟ್ಟಿದ್ದು ಫೇಕ್ ಡಿಡಿ ಎಂದು ಬಹಳ ದಿನಗಳ ನಂತರ ತಿಳಿಯಿತು. ಮೋಸ ಹೋದ ಮೇಲೆ ಆತ ಸಂಪರ್ಕಕ್ಕೂ ಸಿಗಲಿಲ್ಲ. ಇದರಿಂದ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಎಸ್. ನಾರಾಯಣ್ ಹೇಳಿದ್ದಾರೆ.