×
Ad

ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಡವರ ಮನೆಗಳನ್ನು ತೆರವುಗೊಳಿಸುತ್ತೀರಾ: ಹೈಕೋರ್ಟ್ ಪ್ರಶ್ನೆ

Update: 2018-08-31 21:34 IST

ಬೆಂಗಳೂರು, ಆ.31: ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಡವರ ಮನೆಗಳನ್ನು ತೆರವುಗೊಳಿಸುತ್ತೀರಾ? ಎಂದು ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಬೆಳ್ಳಂದೂರಿನ ಮಂತ್ರಿ ವಸತಿ ಸಮುಚ್ಛಯದ ಸಮೀಪವಿರುವ ಮನೆಗಳನ್ನು ತೆರವುಗೊಳಿಸುವಂತೆ, ಅಲ್ಲಿನ ನಿವಾಸಿಗಳಿಗೆ ಪಾಲಿಕೆ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಮಹಾನಗರ ಪಾಲಿಕೆ ಕ್ರಮ್ಕಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಜೊತೆಗೆ ಅರ್ಜಿದಾರರ ಮನೆಗಳನ್ನು ತೆರವುಗೊಳಿಸುವಂತೆ ಅಲ್ಲಿನ ನಿವಾಸಿಗಳಿಗೆ ಪಾಲಿಕೆ ನೀಡಿರುವ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಪೀಠ, ಪ್ರತಿವಾದಿಗಳಾದ ಮಾರತ್ತಹಳ್ಳಿ ಉಪವಿಭಾಗದ ಪಾಲಿಕೆಯ ಸಹಾಯಕ ಇಂಜಿನಿಯರ್, ಮಂತ್ರಿ ಎಸ್ಪಾನಾ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್ ಮಾಲಕರ ಸಂಘಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿದಾರರು ಹಲವು ವರ್ಷಗಳಿಂದ ಶೆಡ್, ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇದೀಗ ಮನೆ ತೆರವು ಮಾಡುವಂತೆ ಪಾಲಿಕೆ ನೋಟಿಸ್ ನೀಡಿದೆ. ಪ್ರತಿವಾದಿಯಾಗಿರುವ ಅಪಾರ್ಟ್‌ಮೆಂಟ್ ನಿವಾಸಿಗಳ ಒತ್ತಡಕ್ಕೆ ಮಣಿದು ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಬೆಳ್ಳಂದೂರಿನ ಮಂತ್ರಿ ಅಪಾರ್ಟ್‌ಮೆಂಟ್ ಸಮೀಪವಿರುವ ಮನೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಆಗಸ್ಟ್ 24ರಂದು ನೀಡಿದ್ದ ನೋಟಿಸ್ ರದ್ದು ಮಾಡುವಂತೆ ಕೋರಿ ಜೈನಬಿ ಸೇರಿ 10 ಮಂದಿ ಹೈಕೋರ್ಟ್ ಮೊರೆಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News